Advertisement
ಜಿಲ್ಲೆಯಲ್ಲಿ ಕೂಲಿಯಾಳುಗಳ ಸಮಸ್ಯೆ ಯಿದ್ದು, ಕಟಾವಿನ ಅವಧಿಯಲ್ಲಿ ಮಳೆಯೂ ಬರುವುದರಿಂದ ರೈತರು ಭತ್ತದ ಬೆಳೆ ಕಟಾವಿಗೆ ಅನಿವಾರ್ಯವಾಗಿ ಯಂತ್ರಗಳನ್ನು ಅವಲಂಬಿಸಿದ್ದಾರೆ. ಈ ಸನ್ನಿವೇಶದ ಪ್ರಯೋಜನ ಪಡೆದು ಕೆಲವೊಂದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಭತ್ತ ಕಟಾವಿಗೆ ಹೆಚ್ಚಿನ ಬಾಡಿಗೆ ದರ ಪಡೆಯುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತರಿಂದ ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಇರುವ ಜಿಲ್ಲಾ ಸಮಿತಿಯು ಯಂತ್ರ ಬಳಕೆಗೆ ಪ್ರತಿ ಗಂಟೆಗೆ 1,800 ರೂ. ಬಾಡಿಗೆ ದರವನ್ನು ನಿಗದಿಪಡಿಸಿದೆ.
ಸರಕಾರದ ನೆರವಿನೊಂದಿಗೆ ಸ್ಥಾಪಿಸಲ್ಪಟ್ಟ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸುಮಾರು 15, ಉಡುಪಿಯಲ್ಲಿ ಕೇವಲ 8 ಕಟಾವು ಯಂತ್ರಗಳಷ್ಟೇ ಲಭ್ಯವಿದ್ದು, ಬೇಡಿಕೆ ಪೂರೈಸಲು ಖಾಸಗಿಯಾಗಿ ಬರುವಕಟಾವು ಯಂತ್ರಗಳು ಅನಿವಾರ್ಯವಾಗಿವೆ. ಆದ್ದರಿಂದ ಕೃಷಿ ಯಂತ್ರಧಾರೆ ಕೇಂದ್ರದ ಬಾಡಿಗೆ ದರವನ್ನು ಮಾನದಂಡವಾಗಿಟ್ಟುಕೊಂಡು ರೈತರೊಂದಿಗೆ ಕಟಾವು ದರದ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ, ನ್ಯಾಯೋಚಿತ ದರದಲ್ಲಿ ರೈತರಿಗೆ ಹೆಚ್ಚಿನ ಹೊರೆಯಾಗದ ಧಾರಣೆಯನ್ನು ನಿಗದಿಪಡಿಸಿಕೊಂಡು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಭತ್ತದ ಕಟಾವು ಕಾರ್ಯವನ್ನುಜಿಲ್ಲೆಯಲ್ಲಿ ಕೈಗೊಳ್ಳುವಂತೆ ಖಾಸಗಿಯಂತ್ರ ಮಾಲಕರು ಹಾಗೂ ರೈತರಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ
Related Articles
ಜಿಲ್ಲೆಯ ಯಂತ್ರಗಳಲ್ಲದೆ ಹೊರಜಿಲ್ಲೆ, ರಾಜ್ಯ ಗಳಿಂದ ಉಡುಪಿ, ದ.ಕ. ಜಿಲ್ಲೆಗೆ ಭತ್ತ ಕಟಾವು ಯಂತ್ರಗಳು ಆಗಮಿಸುತ್ತಿವೆ. ಈ ನಡುವೆ ಮಳೆ ಬಿರುಸು ಪಡೆದುಕೊಂಡಿದ್ದು, ಬಿಡುವು ಪಡೆದುಕೊಂಡ ಬಳಿಕ ಕಟಾವು ಪ್ರಕ್ರಿಯೆ ಆರಂಭಗೊಳ್ಳಲಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ತೆನೆಭರಿತ ಪೈರು ವಾಲಿಕೊಂಡಿವೆ. ಮಳೆ ಬಿಡುವು ನೀಡಿದ ರಷ್ಟೇ ಕಟಾವು ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಲಿದೆ. ಮಳೆ ಮುಂದುವರಿದರೆ ಫಸಲು ನಷ್ಟವಾಗುವ ಭೀತಿ ಕೃಷಿಕರನ್ನು ಕಾಡುತ್ತಿದೆ.
Advertisement