ಮಲಪ್ಪುರಂ:ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುತ್ತಿದ್ದಂತೆಯೇ ರನ್ ವೇಯಲ್ಲಿ ಜಾರಿ ಸಂಭವಿಸಿದ ದುರಂತದಲ್ಲಿ 20 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ದಶಕದ ಹಿಂದೆ ಮಂಗಳೂರಿನಲ್ಲಿ ನಡೆದ ಭೀಕರ ವಿಮಾನ ದುರಂತವನ್ನು ನೆನಪಿಸಿಕೊಂಡಿದ್ದಾರೆ.
ಟ್ವೀಟಿಗರು ನೆನಪಿಸಿಕೊಂಡಿದ್ದು ಹೀಗೆ:
ಕೇರಳ ವಿಮಾನ ದುರಂತ ನಡೆದ ಬೆನ್ನಲ್ಲೇ ಡಾ.ಗೌರವ್ ಗರ್ಗ್ ಅವರು ಟ್ವೀಟ್ ಮಾಡಿದ್ದು, “ 2010ರಲ್ಲಿ ನಾನು ಕರ್ನಾಟಕದಲ್ಲಿ ವಾಸವಾಗಿದ್ದಾಗ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ನೆನಪು ಇನ್ನೂ ಮಾಸಿಲ್ಲ. ನಾವು ಯಾಕೆ ಇನ್ನೂ ಸುರಕ್ಷಿತ ವಿಮಾನ ನಿಲ್ದಾಣಗಳ ಬಗ್ಗೆ ಕಾಳಜಿ ವಹಿಸಿಲ್ಲ? ಎಂಬುದಾಗಿ ಪ್ರಶ್ನಿಸಿದ್ದಾರೆ.
ತರುಣ್ ಶುಕ್ಲಾ ಎಂಬವರು ಕೂಡಾ “ಕೋಯಿಕ್ಕೋಡ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದ ಭಯಾನಕ ಚಿತ್ರಗಳು ಹರಿದಾಡುತ್ತಿದೆ. ಈ ದುರಂತ 2010ರಲ್ಲಿ ಮಂಗಳೂರಿನಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತವನ್ನು ನೆನಪಿಸುತ್ತಿದೆ” ಎಂದು ತಿಳಿಸಿದ್ದಾರೆ.
“2010 ಮೇ 22ರಂದು ಮಂಗಳೂರಿನಲ್ಲಿ ನಡೆದ ವಿಮಾನ ದುರಂತ ಎಷ್ಟು ಮಂದಿಗೆ ನೆನಪಿದೆ? ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ರನ್ ವೇಯಿಂದ ಜಾರಿ ಕಣಿವೆಗೆ ಬಿದ್ದ ಪರಿಣಾಮ 150 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು” ಎಂಬುದಾಗಿ ಡಾ.ಸುನಂದಾ ಬಾಲ್ ಅವರು ಟ್ವೀಟ್ ನಲ್ಲಿ ನೆನಪಿಸಿಕೊಂಡಿದ್ದಾರೆ.
ಮಂಗಳೂರು ದುರಂತದಲ್ಲಿ ಏನಾಗಿತ್ತು?
2010ರಲ್ಲಿ ಮಂಗಳೂರಿನಲ್ಲಿ ನಡೆದ ವಿಮಾನ ದುರಂತದ ಮಾದರಿಯಲ್ಲೇ ಕೇರಳದಲ್ಲಿಯೂ ಸಂಭವಿಸಿದೆ. 2010ರ ದುರಂತದಲ್ಲಿ 158 ಮಂದಿ ಸಾವಿಗೀಡಾಗಿದ್ದರು. ಆಗಲೂ ವಿಮಾನ ರನ್‌ವೇನಲ್ಲಿ ಸ್ಕಿಡ್ ಆಗಿ, ಗೋಡೆಗೆ ಬಡಿದು ಕಮರಿಗೆ ಬಿದ್ದಿತ್ತು. ಈ ವೇಳೆ ವಿಮಾನವು ಹೋಳಾಗಿ, ಬೆಂಕಿ ಹೊತ್ತಿಕೊಂಡಿತ್ತು. ಕೇರಳದಲ್ಲಿ ಶುಕ್ರವಾರ ನಡೆದ ದುರಂತವೂ ಇದೇ ಮಾದರಿಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ. ಈ ಸಂದರ್ಭ ಮಳೆಯೂ ಸುರಿಯುತ್ತಿತ್ತು. ಕರಿಪುರ್ ಏರ್‌ಪೋರ್ಟ್ ಕೂಡ ಟೇಬಲ್‌ಟಾಪ್ ರನ್‌ವೇ (ಬೆಟ್ಟದಂಥ ಪ್ರದೇಶದಲ್ಲಿ ರನ್‌ವೇ ಇದ್ದು, ಅದರ ಎರಡೂ ಭಾಗದಲ್ಲಿ ಅಥವಾ ಒಂದು ಭಾಗದಲ್ಲಿ ಆಳದ ಕಮರಿ ಇರುತ್ತದೆ)ಯನ್ನು ಹೊಂದಿದ್ದು, ಇಂಥ ರನ್‌ವೇಗಳಲ್ಲಿ ಪೈಲಟ್‌ಗಳು ಅತ್ಯಂತ ಹೆಚ್ಚು ಎಚ್ಚರಿಕೆ ಹಾಗೂ ಕೌಶಲದಿಂದ ವಿಮಾನವನ್ನು ಇಳಿಸಬೇಕಾಗುತ್ತದೆ.