ಚೆನ್ನೈ: ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಅವರ ಮನೆಯ ಮೇಲೆ ಮಂಗಳವಾರ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದ ಸೆಂಥಿಲ್ ಬಾಲಾಜಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಣಕಾಸು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಇರುವ ಅವರ ಕಚೇರಿ, ಕರೂರ್, ಈರೋಡ್‌ಗಳಲ್ಲಿ ದಾಳಿ ನಡೆಸಲಾಗಿದೆ. ಅಬಕಾರಿ ಖಾತೆಯನ್ನೂ ಹೊಂದಿರುವ ಬಾಲಾಜಿ ವಿರುದ್ಧ ಉದ್ಯೋಗಕ್ಕಾಗಿ ಲಂಚ ಪಡೆದ ಆರೋಪ ಕೇಳಿ ಬಂದಿತ್ತು.
ಬಾಲಾಜಿ ಅವರನ್ನು ಸುಮಾರು 18 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಬುಧವಾರ, ಇ.ಡಿ ಅಧಿಕಾರಿಗಳು ಬಾಲಾಜಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ ಆಸ್ಪತ್ರೆಯ ಹೊರಗಿನ ನಾಟಕೀಯ ಪ್ರಸಂಗ ನಡೆಯಿತು. ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತರಲಾದ ಡಿಎಂಕೆ ನಾಯಕ ಬಾಲಾಜಿ, ವಾಹನದೊಳಗೆ ನೋವಿನಿಂದ ಮಲಗಿ ಅಳುತ್ತಿರುವುದು ಕಂಡುಬಂದಿತು. ಹೀಗಾಗಿ ಅವರ ಬೆಂಬಲಿಗರು ತನಿಖಾ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಾಲಾಜಿ ಅವರನ್ನು ಆಸ್ಪತ್ರೆಯ ಐಸಿಯುಗೆ ಸೇರಿಸಲಾಗಿದೆ ಎಂದು ಡಿಎಂಕೆ ಸಂಸದ ಮತ್ತು ವಕೀಲ ಎನ್‌ಆರ್ ಎಲಾಂಗೋ ಹೇಳಿದ್ದಾರೆ. ಬಾಲಾಜಿ ಬಂಧನದ ಬಗ್ಗೆ ಇ.ಡಿ ಅಧಿಕೃತವಾಗಿ ತಿಳಿಸಿಲ್ಲ ಎಂದು ಹೇಳಿದರು.
ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಎಂ.ಕೆ.ಸ್ಟಾಲಿನ್, ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಣಿಯಲು ಬಿಜೆಪಿ ತನಿಖಾ ಸಂಸ್ಥೆಗಳ ಮೂಲಕ ಹಿಂಬಾಗಿಲ ತಂತ್ರ ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.