ಮೂಡಲಗಿ: ಕಳೆದ ಹತ್ತು ದಿನಗಳಿಂದ ರೈತರ ಮನೆಯ ಅಂಗಳದಲ್ಲಿ ಕಟ್ಟಿದ್ದ ಸುಮಾರು 12 ಮೇಕೆಗಳು ರಾತ್ರೋರಾತ್ರಿ ಯಾವುದೋ ಅಪರಿಚಿತ ಪ್ರಾಣಿ ದಾಳಿಯಿಂದ ಸಾವಿಗೀಡಾಗಿದ್ದು, ಮಂಗಳವಾರ ರಾತ್ರಿ ಇಬ್ಬರು ರೈತರ ಮನೆಯ ಮುಂದೆ ಕಟ್ಟಿದ್ದ ಆರು ಮೇಕೆಗಳು ಸಾವನ್ನಪ್ಪಿವೆ.
ಪಟ್ಟಣದ ಸೈನಿಕ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಇಲ್ಲಿಯವರೆಗೆ ಸುಮಾರು ಒಟ್ಟು 18 ಮೇಕೆಗಳು ಸಾವನ್ನಪ್ಪಿದ್ದು, ಇದರಿಂದ ಸೈನಿಕ ನಗರದ ಜನ ಕಂಗಾಲಾಗಿದ್ದಾರೆ. ಪ್ರತಿ ಮೇಕೆ ಸುಮಾರು ಏಂಟು ಸಾವಿರಕ್ಕೂ ಅಧಿಕ ಬೆಲೆ ಬಾಳುತ್ತಿದ್ದು, ಇದರಿಂದ ರೈತರಿಗೆ ಅಪಾರ ಹಾನಿ ಅನುಭಸುವಂತಾಗಿದೆ.
ಜೂ.7ರಂದು ಮಂಗಳವಾರ ರಾತ್ರಿ ಚಂದ್ರ ಶಂಕರ ಮಾಲೋಜಿ ಎಂಬುವರ ಎರಡು ಮೇಕೆ ಹಾಗೂ ಶಿವಬೋಧರಂಗ ಶಿವಪ್ಪ ಬಿರಡಿ ಎಂಬುವವರ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸ್ಥಳೀಯರು ಈ ರೀತಿಯಲ್ಲಿ ನಾಯಿಗಳು ಹಾಗೂ ನರಿಗಳು ಮೇಕೆಗಳ ಮೇಲೆ ದಾಳಿ ಮಾಡುವುದಿಲ್ಲ. ಇದು ತೋಳದ ದಾಳಿ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದರಿಂದ ರಾತ್ರಿ ಸಮಯದಲ್ಲಿ ಸಣ್ಣ ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸಲು ಕೂಡ ಜನ ಹೆದರುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಹಾಗೂ ಪಶು ಇಲಾಖೆಯ ಅಧಿಕಾರಿಗಳ ಮುಂದೆ ಜನ ತಮ್ಮ ಅಳಲನ್ನು ತೋಡಿಕೊಂಡರು.
ಅರಣ್ಯ ಇಲಾಖೆಯ ಮಹಾಂತೇಶ ಹಿಪ್ಪರಗಿ ಹಾಗೂ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ಎಂ.ಬಿ ವಿಭೂತಿ, ಪೊಲೀಸ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದರು. ಅಪರಿಚಿತ ಪ್ರಾಣಿಯ ಹೆಜ್ಜೆ ಗುರುತುಗಳನ್ನು ಪರೀಕ್ಷೆಗಾಗಿ ಕಳಿಸಿದ್ದಾರೆ. ವರದಿ ಬಂದ ನಂತರ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದು ರೈತರಿಗೆ ಪರಿಹಾರ ಒಗಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.