ಮುಂಬೈ:ಹದಿನೆಂಟು ದಿನದ ಹಸುಗೂಸು ಮಾರಕ ಕೋವಿಡ್ 19 ವೈರಸ್ ಅನ್ನು ಸೋಲಿಸಿ ಗುಣಮುಖರಾಗುವ ಮೂಲಕ ಮುಂಬೈಯ ಹೀರಾನಂದಾನಿ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಆಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಭಾರತದಲ್ಲಿ ಕ್ಷಿಪ್ರವಾಗಿ ಹರಡುತ್ತಿದ್ದ ಮಾರಣಾಂತಿಕ ವೈರಸ್ ನಿಂದ ಗುಣಮುಖ ಹೊಂದಿರುವ ಅತೀ ಕಿರಿಯ ರೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಮಗುವಿನ ತಾಯಿ ಕೋವಿಡ್ ವೈರಸ್ ವರದಿ ನೆಗೆಟಿವ್ ಎಂದು ಬಂದಿತ್ತು.
ವೈದ್ಯರ ಹೇಳಿಕೆ ಪ್ರಕಾರ, ಮೇ 10ರಂದು ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿದ 3ಗಂಟೆಯಲ್ಲಿಯೇ ಮಗುವಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಮಗುವನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿ ಪರೀಕ್ಷಿಸಿದಾಗ ಕೋವಿಡ್ 19 ವೈರಸ್ ಪತ್ತೆಯಾಗಿತ್ತು.
ಮೇ 12ರಂದು ಹೀರಾನಂದಾನಿ ಆಸ್ಪತ್ರೆಗೆ ಹೆಣ್ಣು ಮಗುವನ್ನು ಸ್ಥಳಾಂತರಿಸಿ ಕೋವಿಡ್ 19 ವೈರಸ್ ಗೆ ಚಿಕಿತ್ಸೆ ನೀಡಲಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಪುಟ್ಟ ಮಗುವನ್ನು ಉಪಕರಣ ರಹಿತ ವೆಂಟಿಲೇಶನ್ ನಲ್ಲಿ ಇರಿಸಲಾಗಿತ್ತು. ಚಿಕಿತ್ಸೆಯ ಬಳಿಕ ಮಗುವನ್ನು ಮೇ 28ರಂದು ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂದಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಾ.ಬಿಜಾಲ್ ಶ್ರೀವಾಸ್ತವ್ ತಿಳಿಸಿದ್ದಾರೆ.