Advertisement

18ರಿಂದ 25ರ ಕನಸು –ಕನವರಿಕೆ

05:50 AM Jul 14, 2017 | Karthik A |

ನಿರ್ದೇಶಕ ಸ್ಮೈಲ್‌ ಶ್ರೀನು ಈ ಹಿಂದೆ ‘ಬಳ್ಳಾರಿ ದರ್ಬಾರ್‌’ ಎಂಬ ಸಿನಿಮಾ ಮಾಡಿದ್ದರು. ಆ ಸಿನಿಮಾ ಜನರಿಗೆ ತಲುಪದ ಕಾರಣ ಸಿನಿಮಾ ಸದ್ದು ಮಾಡಲಿಲ್ಲ ಎಂಬುದನ್ನು ಶ್ರೀನು ಕೂಡಾ ಒಪ್ಪಿಕೊಳ್ಳುತ್ತಾರೆ. ಇಂತಿಪ್ಪ ಶ್ರೀನು ಈಗ ಹೊಸ ಸಿನಿಮಾದೊಂದಿಗೆ ಬಂದಿದ್ದಾರೆ. ಆ ಸಿನಿಮಾಕ್ಕೆ ಅವರಿಟ್ಟ ಹೆಸರು ’18 ರಿಂದ 25′. ಟೈಟಲ್‌ ಹೇಳಿದ ಮೇಲೆ ಇದೊಂದು ಲವ್‌ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. 

Advertisement

ಚಿತ್ರದಲ್ಲಿ 18 ರಿಂದ 15 ವರ್ಷದೊಳಗೆ ನಡೆಯುವ ಘಟನೆಗಳನ್ನು ಶ್ರೀನು ಹೇಳಲು ಹೊರಟಿದ್ದಾರಂತೆ. ‘ಇದು ಯೂತ್‌ಫ‌ುಲ್‌ ಸಬ್ಜೆಕ್ಟ್. ಇವತ್ತಿನ ಜನರೇಶನ್‌ನ್ನು ಗಮನದಲ್ಲಿಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಯೂತ್ಸ್ಗೆಈ ಸಬ್ಜೆಕ್ಟ್ ಕಚಗುಳಿ ಇಟ್ಟಂತಿರುತ್ತದೆ. ಪ್ರೀತಿ, ಪ್ರೇಮ, ಅದರ ಒಳಿತು – ಕೆಡುಕುಗಳು ಕೂಡಾ ಇಲ್ಲಿ ಬಂದು ಹೋಗಲಿದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು ಶ್ರೀನು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಉದ್ದೇಶ ಅವರಿಗಿದೆ.


ಈ ಚಿತ್ರವನ್ನು ತುಮ್ಮಲಪಲ್ಲಿ ರಾಮಸತ್ಯನಾರಾಯಣ ನಿರ್ಮಿಸುತ್ತಿದ್ದಾರೆ. ತೆಲುಗಿನಲ್ಲಿ ಸುಮಾರು 100 ಸಿನಿಮಾಗಳನ್ನು ನಿರ್ಮಿಸಿರುವ ರಾಮಸತ್ಯನಾರಾಯಣ ಅವರಿಗೆ ಶ್ರೀನು ಮಾಡಿರುವ ಕಥೆ ಇಷ್ಟವಾಗಿ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರಂತೆ. ತುಂಬಾ ವರ್ಷಗಳಿಂದ ಕನ್ನಡದಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ಅವರಲ್ಲಿತ್ತಂತೆ. ಅದೀಗ ಈಡೇರಿದೆ ಎನ್ನುತ್ತಾರೆ. ನಟ – ನಟಿಯರ ಮಾರ್ಕೇಟ್‌ ನೋಡಿಕೊಂಡು ತಾನು ಬಜೆಟ್‌ ಹಾಕುವುದರಿಂದ ತನಗೆ ಸಿನಿಮಾದಿಂದ ಹೆಚ್ಚಿನ ನಷ್ಟವೇನೂ ಆಗಿಲ್ಲ ಎನ್ನುವ ಅವರು, ಈ ಸಿನಿಮಾವನ್ನು ಲೆಕ್ಕಾಚಾರದ ಮೇಲೆಯೇ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅಭಿರಾಮ್‌ ಹಾಗೂ ರಿಷಿತೇಜ ನಾಯಕರು. ಇಬ್ಬರು ಕೂಡಾ ಬಳ್ಳಾರಿ ಮೂಲದವರು. ಸ್ಮೈಲ್‌ ಶ್ರೀನು ಅವರ ನಟನಾ ಸ್ಕೂಲ್‌ನ ವಿದ್ಯಾರ್ಥಿಗಳು. ಈಗ ಈ ಸಿನಿಮಾ ಮೂಲಕ ನಾಯಕರಾಗುತ್ತಿದ್ದಾರೆ. ಇಬ್ಬರು ಇಲ್ಲಿ ಹುಡುಗಿ ಹಿಂದೆ ಬೀಳುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಅಖೀಲಾ ಹಾಗೂ ವಿದ್ಯಾಶ್ರೀ ನಾಯಕಿಯರು. ಅಖೀಲಾ ಇಲ್ಲಿ ಬಬ್ಲಿ ಹುಡುಗಿಯಾಗಿ, ಪ್ರೀತಿಯಲ್ಲಿ ಬೀಳುವ  ಪಾತ್ರದಲ್ಲಿ ಕಾಣಿಸಿಕೊಂಡರೆ, ವಿದ್ಯಾಶ್ರಿ ಅದಕ್ಕೆ ವಿರುದ್ಧವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಚಿತ್ರಕ್ಕೆ ಚರಣ್‌ ಅರ್ಜುನ್‌ ಸಂಗೀತ, ಶಿವ ನಾಯ್ಡು ಛಾಯಾಗ್ರಹಣವಿದೆ.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next