Advertisement

ಹೆಬ್ರಿ-ಮಲ್ಪೆ ರಸ್ತೆಗಾಗಿ 1,754 ಮರಗಳು ಬಲಿ !

01:17 PM Dec 24, 2022 | Team Udayavani |

ಉಡುಪಿ; ಹೆಬ್ರಿ-ಪರ್ಕಳ ರಾ.ಹೆ.(169ಎ) ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ 1734 ಮರಗಳಿಗೆ ಕೊಡಲಿ ಏಟು ಬೀಳಲಿದ್ದು, ಇದೇ ಮೊದಲ ಭಾರಿಗೆ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ಇಷ್ಟೊಂದು ಸಂಖ್ಯೆಯ ಮರಗಳು ಧರೆಗುರುಳುತ್ತಿವೆ.

Advertisement

ಉಡುಪಿ ನಗರಸಭೆ ವ್ಯಾಪ್ತಿ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ 205 ಮರಗಳನ್ನು ತೆರವುಗೊಳಿಸಲು ಮತ್ತು ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ಮುಳ್ಳುಗುಡ್ಡೆಯಿಂದ ತಾಣದಮನೆವರೆಗೆ ಇರುವ ಒಟ್ಟು ವಿವಿಧ ಜಾತಿಯ 1,549 ಮರಗಳನ್ನು ತೆರವುಗೊಳಿಸಲು ಅಂತಿಮ ಸಿದ್ಧತೆ ನಡೆಯುತ್ತಿದೆ.

ತೀರ್ಥಹಳ್ಳಿ-ಮಲ್ಪೆ ರಾ.ಹೆ 169ಎ ವಿಭಾಗದ ಹೆಬ್ರಿ-ಮಲ್ಪೆ ಚತುಷ್ಪಥ ರಸ್ತೆ ವಿಸ್ತರಣೆ ಯೋಜನೆಗಾಗಿ ಅನುದಾನ ಮಂಜೂರು ಮಾಡಿದ್ದು, ಅಲ್ಲಲ್ಲಿ ಕಾಮಗಾರಿ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹೆಬ್ರಿಯಿಂದ-ಪರ್ಕಳದವರೆಗೆ ಮತ್ತು ಮಲ್ಪೆಯಿಂದ-ಕರಾವಳಿ ಜಂಕ್ಷನ್‌ ವರೆಗೆ ಎರಡು ವಿಭಾಗದಲ್ಲಿ ಕಾಮಗಾರಿ ನಡೆಯಲಿದೆ. ಕಲ್ಮಾಡಿ ಹೊಳೆ, ಹೆಬ್ರಿ ಸೀತಾನದಿ, ಪೆರ್ಡೂರು ಸ್ವರ್ಣಾ ನದಿಗೆ ಸೇತುವೆ ನಿರ್ಮಾಣವಾಗಲಿದ್ದು, ಇದಕ್ಕೆ 355.72 ಕೋ. ರೂ. ಮೊತ್ತ ವ್ಯಯವಾಗಲಿದೆ.

ಅರಣ್ಯೀಕರಣ ವೆಚ್ಚ ಭರಿಸಬೇಕು
ರಾ. ಹೆ. ಪ್ರಾಧಿಕಾರ ಹೆದ್ದಾರಿ ಅಭಿವೃದ್ಧಿ ಮರ ಕಡಿಯಲು ಸಾಕಷ್ಟು ನಿಯಮಾವಳಿ ಪಾಲಿಸಬೇಕು. ಅರಣ್ಯ ಇಲಾಖೆ, ಪ್ರಾಧಿಕಾರ ಜಂಟಿ ಸಮೀಕ್ಷೆ ನಡೆಸಿ ಮರ ಗುರುತಿಸಿ ಬಳಿಕ ಸಾರ್ವಜನಿಕ ಅಹವಾಲು ಸಭೆ ಕರೆದು ಸಾರ್ವಜನಿಕರ ಆಕ್ಷೇಪ ಇಲ್ಲದ ವರದಿ ಪರಿಗಣಿಸಿ, ಅರಣ್ಯ ಇಲಾಖೆ ಹೆದ್ದಾರಿ ಇಲಾಖೆಗೆ ಮರ ಕತ್ತರಿಸಲು ಅನುಮತಿ ನೀಡುತ್ತದೆ. ಮರ ಕತ್ತರಿಸುವ ಮುನ್ನ ಅರಣ್ಯೀಕರಣ ವೆಚ್ಚವನ್ನು ಪ್ರಾಧಿಕಾರ ಅರಣ್ಯ ಇಲಾಖೆಗೆ ಪಾವತಿಸಬೇಕು. ಒಂದು ಮರ ಕಡಿದಲ್ಲಿ 10 ಮರ ನೆಡಬೇಕು ಎಂಬ ನಿಯಮದಂತೆ ಒಂದು ಮರಕ್ಕೆ 411.27 ರೂ. ದರವಿದ್ದು, ಇದರ 10ರಷ್ಟು ವೆಚ್ಚ ಪಾವತಿಸಬೇಕು. ಅನಂತರ ಒಂದು ಕಿ. ಮೀ.ಗೆ 3 ಲಕ್ಷ ರೂ.ನಂತೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು.

ಸಭೆಗೆ ಸಾರ್ವಜನಿಕರು ಗೈರು
ಅರಣ್ಯ ಇಲಾಖೆ ಉಡುಪಿ ವಲಯ ಕಚೇರಿ ಸಾರ್ವಜನಿಕ ಅಹವಾಲು ಸಭೆ ಕರೆದಿದ್ದು, ಇದಕ್ಕೆ ಒಬ್ಬರೂ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಸಾರ್ವಜನಿಕ ಸಭೆ ಡಿ.31 ರಂದು ಹೆಬ್ರಿ ವಲಯ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು, ಎಷ್ಟು ಮಂದಿ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

Advertisement

ಸಾಧ್ಯವಾದಷ್ಟು ಮರ ಉಳಿಸಲು ಇಲಾಖೆ ಶ್ರಮ ವಹಿಸಲಿದೆ
ಹೆಬ್ರಿ-ಮಲ್ಪೆ ರಸ್ತೆ ವಿಸ್ತರಣೆ ಯೋಜನೆಗೆ ಸಂಬಂಧಿಸಿ ಇನ್ನೂ ಮರಗಳ ತೆರವಿಗೆ ಅನುಮತಿ ನೀಡಿಲ್ಲ. ರಸ್ತೆ ಅಭಿವೃದ್ಧಿ ಯೋಜನೆಗೂ ಹಿನ್ನಡೆಯಾಗದಂತೆ ಮರಗಳನ್ನು ಕನಿಷ್ಠ ಸಂಖ್ಯೆಯಲ್ಲಿ ಸಂರಕ್ಷಿಸುವ ಪ್ರಯತ್ನ ಇಲಾಖೆ ಮಾಡಲಿದೆ. ಈಗಾಗಲೇ ಗುರುತಿಸಿ ರುವ ಮರಗಳ ವರದಿ ಪರಿಶೀಲನೆ ನಡೆಸಿದ್ದೇನೆ. ಇನ್ನೊಮ್ಮೆ ಸ್ಥಳ ಪರಿಶೀಲನೆ ನಡೆಸಿಯೇ ಇದನ್ನು ಅಂತಿಮಗೊಳಿಸಲಾಗುವುದು. ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಳ್ಳಲು ಇಲಾಖೆ ಶ್ರಮಿಸಲಿದೆ.
ಉದಯ ನಾಯ್ಕ , ವೃಕ್ಷ ಅಧಿಕಾರಿ, ಉಪ ಅರಣ್ಯ
ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ

ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next