Advertisement

ಈ ವರ್ಷ ದೇಶದಲ್ಲಿ 179 ಶಿಕ್ಷಣ ಸಂಸ್ಥೆಗಳಿಗೆ ಬೀಗ!

11:40 AM Aug 02, 2020 | sudhir |

ಮಣಿಪಾಲ: ಈ ವರ್ಷ ದೇಶದಲ್ಲಿ 179 ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2020-21ರ ಶೈಕ್ಷಣಿಕ ವರ್ಷದಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಬ್ಯುಸಿನೆಸ್‌ ಕಾಲೇಜುಗಳ ಸಹಿತ ಒಟ್ಟು 179 ವೃತ್ತಿಪರ ಕಾಲೇಜುಗಳು ಮುಚ್ಚಲ್ಪಟ್ಟಿವೆ.

Advertisement

9 ವರ್ಷಗಳ ಬಳಿಕ
ಒಂಬತ್ತು ವರ್ಷಗಳ ಬಳಿಕ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. 2019-2020ರ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಇನ್ನೂ 134 ಸಂಸ್ಥೆಗಳು ಹೊಸ ಬ್ಯಾಚ್‌ಗಳಿಗಾಗಿ ಸರಕಾರದಿಂದ ಅನುಮೋದನೆ ಪಡೆಯಲು ಬಾಕಿ ಇದೆ ಎಂದು ಎಐಸಿಟಿಇ ಹೇಳಿದೆ.

ಏನು ಕಾರಣ?
ಕೋವಿಡ್ ಸಂಬಂಧ ಜಾರಿಗೆ ತರಲಾದ ಲಾಕ್‌ಡೌನ್‌ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಕಠಿನ ಉದ್ಯೋಗ ವಾತಾವರಣ, ಬೇಡಿಕೆ ಕುಸಿತ ಮತ್ತು ಕೋವಿಡ್‌ -19 ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳ ನೋಂದಣಿಗೆ ಅಡ್ಡಿಯಾಗುತ್ತಿದೆೆ. ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸವಾಲುಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ವಾತಾವರಣ ಕಂಡುಬರುತ್ತಿಲ್ಲ. ದೂರದಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೇರಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಕುಟುಂಬಗಳ ಆದಾಯವೂ ಕಡಿಮೆಯಾಗಿದೆ. ಇದು ಸಹಜವಾಗಿ ಶುಲ್ಕ ಪಾವತಿಯನ್ನು ವಿಳಂಬಗೊಳಿಸಿದೆ.

ಸೀಟ್‌ ಕಡಿತ
ದೇಶದ 762 ಕಾಲೇಜುಗಳಲ್ಲಿ ಸುಮಾರು 70,000 ಸೀಟ್‌ಗಳ ಮೇಲೆ ಪರಿಣಾಮ ಬೀರಲಿದೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 1,53,932ರಷ್ಟು ಸೀಟ್‌ಗಳು ಕಡಿಮೆಯಾಗಿವೆ. 2020-21ರ ಶೈಕ್ಷಣಿಕ ವರ್ಷದಲ್ಲಿ ಫಾರ್ಮಸಿ ಮತ್ತು ವಾಸ್ತುಶಿಲ್ಪ ಸಂಸ್ಥೆಗಳಲ್ಲಿ ಎಐಸಿಟಿಇ ಅನುಮೋದಿಸಿದ ಸೀಟ್‌ಗಳ ಪೈಕಿ ಒಟ್ಟು 1.09 ಲಕ್ಷ ಸೀಟ್‌ಗಳನ್ನು ಕಡಿತಗೊಳಿಸಲಾಗಿದೆ.

ಪ್ರವೇಶ ಇಳಿಕೆ
179 ಸಂಸ್ಥೆಗಳಲ್ಲಿ ಕನಿಷ್ಠ 134 ಕಾಲೇಜುಗಳಲ್ಲಿ ಕೆಲವೇ ಮಂದಿ ಪ್ರವೇಶ ಬಯಸಿದ್ದಾರೆ. ಕಳೆದ ಐದು ವರ್ಷಗಳಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಕನಿಷ್ಠ 44 ಕಾಲೇಜುಗಳು ನಿಯಾಮಾವಳಿ ಮತ್ತು ದಂಡನಾ ಕ್ರಮಗಳಿಂದಾಗಿ ಪ್ರವೇಶ ಪ್ರಕ್ರಿಯೆಯಿಂದ ದೂರ ಸರಿದಿವೆ. ಇದಲ್ಲದೇ 92 ತಾಂತ್ರಿಕ ಸಂಸ್ಥೆಗಳು 2019-20ರ ಅವಧಿಯಲ್ಲಿ ಸಂಪೂರ್ಣ ಮುಚ್ಚಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next