Advertisement

ಅತಿವೃಷ್ಟಿಯಿಂದ 172 ಕೋಟಿ ರೂ. ಬೆಳೆ ಹಾನಿ

05:34 PM Nov 17, 2021 | Team Udayavani |

ಕಲಬುರಗಿ: ಕಳೆದ ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 172 ಕೋಟಿ ರೂ.ಗೂ ಅಧಿಕ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರ್ಷದ ಸರಾಸರಿಗಿಂತ ಪ್ರಸಕ್ತವಾಗಿ ಶೇ. 35ರಷ್ಟು ಹೆಚ್ಚುವರಿ ಮಳೆಯಾಗಿದೆ. ಇಲ್ಲಿಯವರೆಗೆ ಸರಾಸರಿ 742 ಮಿ.ಮೀ ಮಳೆ ಆಗಬೇಕಿತ್ತು. ಆದರೆ 1200 ಮಿ.ಮೀ ಮಳೆ ಆಗಿದೆ. ಕಳೆದ ಎರಡು ದಶಕಗಳಲ್ಲಿ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಮಾತ್ರ ಹೆಚ್ಚುವರಿ ಮಳೆ ಆಗಿದೆ.

Advertisement

ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದ ಆದ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ವರದಿ ರೂಪಿಸಲಾಗಿದ್ದು, 136 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ನಷ್ಟವಾಗಿರುವ ಶೇ. 30ರಷ್ಟು ಮಾತ್ರ ಪರಿಹಾರ ನೀಡಲಾಗುತ್ತದೆ. ಅದನ್ನು 172 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 6 ಲಕ್ಷ ಎಕರೆ ಬೆಳೆ ಹಾನಿಯಾಗಿದೆ. ಇದರಲ್ಲಿ ಪ್ರಮುಖವಾಗಿ ತೊಗರಿ, ಹತ್ತಿ, ಉದ್ದು, ಹೆಸರು, ಸೋಯಾಬಿನ್‌ ಸೇರಿವೆ.

ಮುಂಗಾರು ಹಂಗಾಮಿನಲ್ಲಿ ಶೇ. 99ರಷ್ಟು ಅಂದರೆ 7ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಹಾಳಾದ ಬೆಳೆ ಜಾಗದಲ್ಲಿ ಜೋಳ, ಕುಸುಬಿ, ಕಡಲೆ ಮುಂಗಾರಿ ಪ್ರಮುಖ ಬೆಳೆಯಾಗಿ ಬೆಳೆಯಲು ಮುಂದಾಗಿದ್ದಾರೆ. ಆದರೆ ಈ ಸಮಯದಲ್ಲೂ ಮಳೆ ಬೀಳುತ್ತಿರುವುದು ಬಿತ್ತನೆಗೆ ಅಡ್ಡಿಯಾಗಿದೆ. ಅಲ್ಲದೇ ಬಿತ್ತನೆಯಾದ ಬೆಳೆಗಳು ಸಹ ಹಾನಿಯಾಗುವಂತೆ ಆಗಿದೆ. ಒಂದು ಅಂದಾಜಿನ ಪ್ರಕಾರ ಹಿಂಗಾರು ಬಿತ್ತನೆಯಲ್ಲಿ ಸುಮಾರು ಎರಡು ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಹೆಚ್ಚುವರಿಯಾಗಿದೆ. ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆ ಪ್ರದೇಶದಲ್ಲಿ ಬಿತ್ತನೆಗೆ ಮುಂದಾಗಿರುವುದೇ ಭೂಮಿ ಹೆಚ್ಚಳವಾಗಲು ಕಾರಣವಾಗಿದೆ.

ತುಂತುರು ಮಳೆ ಹಾಗೂ ಮಂಜು ತೊಗರಿಗೆ ಅಡ್ಡಿ:
ಕಳೆದ ವಾರದಿಂದ ಮಂಜು ಕವಿದ ವಾತಾವರಣ ಹಾಗೂ ಸುರಿಯುತ್ತಿರುವ ಮಳೆಯು ತೊಗರಿ ಬೆಳೆಗೆ ಹಾನಿಕಾರಕವಾಗಿದೆ. ಮಂಜುಕವಿದ ವಾತಾವರಣದಿಂದ ಕೀಟ ಬಾಧೆ ಹೆಚ್ಚಾಗಿದೆ. ತುಂತುರು ಮಳೆಯೂ ಸಹ ತೊಗರಿ ಹೂವು ಉದುರುತ್ತಿದೆ. ಕಳೆದ ವರ್ಷ ಸಹ ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು. ಪ್ರಸಕ್ತವಾಗಿಯೂ ಸಹ ಪುನರಾವರ್ತನೆಯಾದಂತೆ ಆಗಿದೆ. ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘಟನೆಗಳು ಈಗಾಗಲೇ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಆಗ್ರಹಿಸಿದೆ.

*ಹಣಮಂತರಾವ ಭೈರಾಮಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next