ತಿರುವನಂತಪುರ: ಕೇರಳದಲ್ಲೊಂದು ಕೊಲೆ ಘಟನೆ ಸಿನಿಮಾ ಮಾದರಿಯಲ್ಲಿ ತನ್ನ ರಹಸ್ಯವನ್ನು ಬಿಟ್ಟುಕೊಟ್ಟಿದೆ. ಅದೂ 17 ವರ್ಷಗಳ ನಂತರ!
2006, ಮೇ 26ರಂದು 50 ವರ್ಷದ ರಮಾದೇವಿ ಎಂಬಾಕೆಯ ಹತ್ಯೆ ಪಟ್ಟಣಂತಿಟ್ಟ ಜಿಲ್ಲೆಯ ಪುಲ್ಲದ್ ಎಂಬ ಹಳ್ಳಿಯಲ್ಲಿ ನಡೆದಿತ್ತು. ತಮಿಳುನಾಡಿನಿಂದ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕ ಈ ಕೊಲೆ ಮಾಡಿದ್ದಾನೆಂದು 17 ವರ್ಷಗಳಿಂದ ನಂಬಿಕೊಂಡು ಬರಲಾಗಿತ್ತು. ಮೊನ್ನೆ ಮಂಗಳವಾರ ದಿಢೀರನೆ ರಮಾದೇವಿ ಪತಿ ಜನಾರ್ಧನನ್ ಐಯ್ಯರ್‌ರನ್ನು ಬಂಧಿಸಲಾಗಿದೆ!
2006ರಲ್ಲಿ ರಮಾದೇವಿಯನ್ನು ಕಡಿದು ಕೊಲೆ ಮಾಡಲಾಗಿತ್ತು. ಆಗ ಪತಿ ಜನಾರ್ಧನನ್ ನಾನೇ ಮೊದಲು ಪತ್ನಿಯ ಶವವನ್ನು ನೋಡಿದ್ದು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು, ನಾನು ಬೇರೊಂದು ಮಾರ್ಗದಿಂದ ಒಳಗೆ ಹೋದೆ ಎಂದು ತಿಳಿಸಿದ್ದರು. ಕೊಲೆಯಾದ ಮರುದಿನವೇ ತಮಿಳುನಾಡಿನ ಕಾರ್ಮಿಕ ನಾಪತ್ತೆಯಾಗಿದ್ದ. ಆತ ವಾರದ ಮುನ್ನವಷ್ಟೇ ಪತ್ನಿಯೊಂದಿಗೆ ಪಕ್ಕದೂರಿಗೆ ಕೆಲಸಕ್ಕೆ ಹೋಗಿದ್ದ. ಅದಕ್ಕೆ ಸರಿಯಾಗಿ ಆ ಊರಿನ ಹೆಂಗಸೊಬ್ಬರು, ಕೊಲೆಯಾದ ದಿನ ತಾನು ಆ ನೌಕರನನ್ನು ಮನೆಯ ಸನಿಹ ನೋಡಿದ್ದೆ ಎಂದು ತಿಳಿಸಿದ್ದರು. ಯಾವಾಗ ಸಂಶಯ ತನ್ನ ಮೇಲೆಯೇ ಇದೆ ಎಂದು ಖಾತ್ರಿಯಾಯಿತು, ಆ ವ್ಯಕ್ತಿ ಶಾಶ್ವತವಾಗಿ ನಾಪತ್ತೆಯಾದ.
ಕಳೆದ ವರ್ಷ ಸುನೀಲ್ ರಾಜ್ ಎಂಬ ಪೊಲೀಸ್ ಇನ್‌ಸ್ಪೆಕ್ಟರ್ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಅವರು ವಿಧಿವಿಜ್ಞಾನ ಪರೀಕ್ಷೆ ವೇಳೆ ರಮಾದೇವಿ ಕೈಯಲ್ಲಿ ಸಿಕ್ಕ ಕೂದಲುಗಳನ್ನು, ಜನಾರ್ಧನನ್ ಕೂದಲಿಗೆ ತಾಳೆ ಹಾಕಿ ನೋಡಿದ್ದಾರೆ. ಅದೂ ಹೊಂದಿಕೊಂಡಿದೆ. ಆಮೇಲೆ ಅವರ ಹೇಳಿಕೆಗಳಲ್ಲಿನ ಗೊಂದಲಗಳನ್ನು ಗಮನಿಸಿದ್ದಾರೆ. ಎಲ್ಲವೂ ನಿಕ್ಕಿಯಾದ ಮೇಲೆ ಪ್ರಸ್ತುತ 75 ವರ್ಷದ ಜನಾರ್ಧನನ್ ಅವರೇ ಕೊಲೆಗಾರ ಎಂದು ಖಚಿತವಾಗಿದೆ ಎಂದು “ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.