ಲಕ್ನೋ: ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರಿಬ್ಬರು 17 ವರ್ಷದ ಬಾಲಕನಿಗೆ ಮನಬಂದಂತೆ ಹೊಡೆದ ಕಾರಣ ಬಾಲಕ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಪರಿಣಾಮ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಉನ್ನಾವೋದ ಬಂಗರ್ಮೌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಾಲಕ ಮನೆಮುಂದೆ ತರಕಾರಿ ಮಾರುತ್ತಿದ್ದ. ಆಗ ಸ್ಥಳೀಯ ಪೊಲೀಸರು ಆತನನ್ನು ಹಿಡಿದು ಠಾಣೆಗೆ ಕರೆದುಕೊಂಡು ಹೋಗಿದ್ದು, ಮನಬಂದಂತೆ ಥಳಿಸಲಾಗಿದೆ ಎನ್ನಲಾಗಿದೆ.
ಬಾಲಕನ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆ ವೇಳೆಗೆ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಡಾಮಿನೋಸ್ ಡೇಟಾಗಳು ಡಾರ್ಕ್ ವೆಬ್ ನಲ್ಲಿ ಸೋರಿಕೆ: ಸೈಬರ್ ಪರಿಣಿತರು ಹೇಳುವುದೇನು ?
ಪೊಲೀಸರ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಿದ್ದಾರೆ. ಬಾಲಕನ ಮನೆಯವರಿಗೆ ಸರ್ಕಾರಿ ಕೆಲಸ ಮತ್ತು ಪರಿಹಾರ ನೀಡಲು ಆಗ್ರಹಿಸಿದ್ದಾರೆ.
ಘಟನೆಯ ಬಳಿಕ ಎಚ್ಚೆತ್ತ ಇಲಾಖೆ, ಇಬ್ಬರು ಕಾನ್ಸ್ಟೇಬಲ್ ಗಳು ಮತ್ತು ಓರ್ವ ಹೋಂ ಗಾರ್ಡ್ ನನ್ನು ಅಮಾನತು ಮಾಡಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.