ಮುಳಬಾಗಿಲು: ತಾಲೂಕಿನಲ್ಲಿ ಸುಮಾರು 106 ಹಳ್ಳಿಗಳ 731 ರೈತರು 912 ಎಕರೆ ಕೃಷಿಭೂಮಿಯಲ್ಲಿ ಬೆಳೆದಿರುವ ಆಲೂಗಡ್ಡೆ ಬೆಳೆಯಲ್ಲಿ ವಾತಾವರಣದಲ್ಲಿನ ಅಧಿಕ ಉಷ್ಣಾಂಶದಿಂದ ಗಡ್ಡೆಗಳು ಬಿಡದೇ ಇರುವುದರಿಂದ ಇದನ್ನು ವಿಶೇಷ ನೈಸರ್ಗಿಕ ವಿಕೋಪ ಭಾದಿತ ಪ್ರದೇಶವೆಂದು ಪರಿಗಣಿಸಿ, ಎನ್ ಡಿಆರ್‌ಎಫ್ ಅಡಿಯಲ್ಲಿ ಪ್ರತಿ ಹೆಕ್ಟೇರ್‌ಗೆ 17 ಸಾವಿರ ರೂ.ನಂತೆ 62.02 ಲಕ್ಷ ರೂ.ನಷ್ಟ ಪರಿಹಾರ ನೀಡಲು ಹಣ ಬಿಡುಗಡೆಗೆ ತೋಟಗಾರಿಕೆ ಅಧಿಕಾರಿಗಳು 2ನೇ ಬಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ತಾಲೂಕಿನಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ನಾಟಿ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದರೂ, ಆಲೂಗಡ್ಡೆ ಫಸಲು ಬಾರದೇ ಬೇಸರಗೊಂಡ ರೈತರು, ಆಲೂಗಡ್ಡೆ ತೋಟಗಳನ್ನೇ ನಾಶ ಮಾಡಿದ ದಾರುಣ ವಿಚಾರವನ್ನು ಅ.16ರ ಉದಯವಾಣಿ ಪತ್ರಿಕೆಯಲ್ಲಿ “ನಕಲಿ ಆಲೂಗಡ್ಡೆ ಬಿತ್ತನೆ: ಬೆಳೆ ನಾಶ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ ನಾಟಿ, ಫಸಲು ಬರದಿದ್ದನ್ನು ಕಂಡು ಕಂಗಾಲಾದ ಅನ್ನದಾತ” ಶೀರ್ಷಿಕೆಯಡಿ ವಿಶೇಷ ಲೇಖನ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಮತ್ತು ಶಾಸಕ ಸಮೃದ್ಧಿ ಮಂಜುನಾಥ್, ಅದೇ ದಿನವೇ ಸೀಗೇನಹಳ್ಳಿ ಗ್ರಾಮದ ರೈತ ರಾಜು ಅವರ ಆಲೂಗಡ್ಡೆ ತೋಟಕ್ಕೆ ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಆಗಮಿಸಿ ಆಲೂಗಡ್ಡೆ ಬೆಳೆಯಲ್ಲಿ ಗಡ್ಡೆಯೇ ಇಲ್ಲದಿರುವುದನ್ನು ಪರಿಶೀಲಿಸಿ ಆಲೂಗಡ್ಡೆ ಗಿಡಗಳನ್ನು ವಿಜ್ಞಾನಿಗಳು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದರು.
ಕನಿಷ್ಟ 50 ಸಾವಿರ ರೂ.ಪರಿಹಾರ: ವಿಜ್ಞಾನಿಗಳ ವರದಿ ಸಮೇತ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಪತ್ರವನ್ನು ಪಡೆದ ಶಾಸಕ ಸಮೃದ್ಧಿ ವಿ.ಮಂಜುನಾಥ್, ತಾಲೂಕಿನ 106 ಹಳ್ಳಿಗಳ 731 ರೈತರು 912 ಎಕರೆ ಕೃಷಿ ಭೂಮಿಯಲ್ಲಿ ಆಲೂಗಡ್ಡೆ ಬೀಜ ಬಿತ್ತನೆ ಮಾಡಿ ನಷ್ಟ ಹೊಂದಿದ್ದು, ಪ್ರತಿ ಎಕರೆಗೆ ಕನಿಷ್ಟ 50 ಸಾವಿರ ರೂ.ಪರಿಹಾರ ನಿಗದಿಪಡಿಸಿ, ಬೆಳೆ ಪರಿಹಾರವನ್ನು ರೈತರಿಗೆ ಕೂಡಲೇ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕೆಂದು ಅ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಸದರಿ ವರದಿಯನ್ವಯ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದ್ದರಿಂದ ತೋಟಗಾರಿಕೆ ಅಧಿಕಾರಿಗಳು ಪ್ರತ್ಯೇಕ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದರಂತೆ ತಾಲೂಕಿನಲ್ಲಿ ಆಲೂಗಡ್ಡೆ ಬೆಳೆಯನ್ನು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ವರದಿಯಂತೆ ಮುಳಬಾಗಿಲು 364.83 ಹೆ, ಬಂಗಾರುಪೇಟೆ ತಾಲೂಕು 189.06 ಹೆಕ್ಟೇರ್, ಕೆಜಿಎಫ್ 67.66 ಹೆ., ಕೋಲಾರ 93.47 ಹೆ, ಮಾಲೂರು 554.76 ಹೆ, ಶ್ರೀನಿವಾಸಪುರ 5.24 ಹೆ, ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1275.02 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ನಾಟಿ ಮಾಡಲಾಗಿದೆ.
ತೋಟಕ್ಕೆ ಭೇಟಿ ನೀಡಿ, ಪರಿಶೀಲನೆ: ಆಲೂಗಡ್ಡೆ ಬೆಳೆಯಲ್ಲಿ ಆಗಸ್ಟ್, ಸೆಪ್ಟಂಬರ್, ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅತಿಯಾದ ಉಷ್ಣಾಂಶ ಮತ್ತು ಒಣ ಹವೆಯಿಂದ ಗಡ್ಡೆಗಳು ಬಿಡದೇ ಶೇ.80-90ರಷ್ಟು ಇಳುವರಿ ಕುಂಠಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2023 ಅ.16ರಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆ, ಮುಳಬಾಗಿಲು ತಾಲೂಕು ಅಧಿಕಾರಿಗಳ ತಂಡವು ಶಾಸಕ ಸಮೃದ್ಧಿ ಮಂಜುನಾಥ್ ಅವರೊಂದಿಗೆ ಉದಯಯವಾಣಿ ದಿನಪತ್ರಿಕೆಯಲ್ಲಿ ವರದಿಯಾಗಿದ್ದ ಮಾಹಿತಿ ಆಧರಿಸಿ ಸೀಗೇನಹಳ್ಳಿ ಗ್ರಾಮದ ರೈತನ ಆಲೂಗಡ್ಡೆ ಬೆಳೆದಿದ್ದ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಬಿತ್ತನೆಗೆ ಚಳಿಗಾಲ ಸೂಕ್ತ ಸಮಯ: ತಾಲೂಕಿನಲ್ಲಿ ಆಲೂಗಡ್ಡೆ ಬೆಳೆಯಲು ಚಳಿಗಾಲ ಮಾತ್ರ ಸೂಕ್ತವಾಗಿದ್ದು, ಅಕ್ಟೋಬರ್‌ನಿಂದ ನವಂಬರ್ ಕೊನೆಯವರೆಗೆ ಬಿತ್ತನೆ ಮಾಡಬಹುದು. ಕೆಲವೊಮ್ಮೆ ರೈತರು ತಮ್ಮ ಮಳೆಯ ಆದಾಗ ಸ್ವಲ್ಪ ಬೇಗನೆ ಅಂದರೆ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಬೆಳೆಯುವುದನ್ನು ರೂಢಿಸಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ತಂಪು ವಾತಾವರಣ ಇದ್ದಾಗ ಮಾತ್ರ ಉತ್ತಮ ಗಡ್ಡೆಗಳ ಬೆಳವಣಿಗೆ ಕಂಡುಬರುತ್ತದೆ. ವಾತಾವರಣದಲ್ಲಿ ಆಕಸ್ಮಿಕ ಏರುಪೇರಾಗಿ ಬೆಳೆಗೆ ಬೇಕಾದ ಸೂಕ್ತ ವಾತಾವರಣ ಲಭ್ಯವಿಲ್ಲದಿದ್ದಾಗ ಗಡ್ಡೆ ಬಿಡುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಅನುದಾನ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ : ಆಲೂಗಡ್ಡೆ ಬೆಳೆ ನಾಟಿ ಮಾಡಿ ನಷ್ಟ ಹೊಂದಿರುವ ರೈತರಿಗೆ ಎನ್‌ಡಿಆರ್‌ಎಫ್ ಯೋಜನೆಯಡಿ ಒಂದು ಹೆಕ್ಟೇರ್‌ಗೆ 17 ಸಾವಿರ ಪರಿಹಾರ ನೀಡಲು 2ನೇ ಬಾರಿಗೆ ಇತ್ತೀಚಿಗೆ ಸರ್ಕಾರಕ್ಕೆ ಡೀಸಿ ಮೂಲಕ ವರದಿ ಸಲ್ಲಿಸಲಾಗಿದೆ. ಆದರೆ, ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲವೆಂದು ಮುಳಬಾಗಿಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎನ್. ರಮೇಶ್ ಹಾಗೂ ಕೋಲಾರ ಜಿಲ್ಲೆ ತೋಟಗಾರಿಕೆ ಉಪ ನಿರ್ದೇಶಕರಾದ ಕುಮಾರಸ್ವಾಮಿ ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.
ಹೆಚ್ಚಿನ ಉಷ್ಣಾಂಶದಿಂದ ಆಲೂಗಡ್ಡೆ ಬೆಳೆ ವಿಫಲ:
ಈ ಹಿಂದೆಯೂ 2014ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಿನ ಉಷ್ಣಾಂಶದಿಂದ ಆಲೂಗಡ್ಡೆ ಬೆಳೆಯು ವಿಫಲವಾಗಿತ್ತು. ಆದ್ದರಿಂದ, ಈ ಕ್ಷೇತ್ರ ಭೇಟಿ ವೇಳೆ ದೀರ್ಘಕಾಲ ವೀಕ್ಷಣೆ ಮತ್ತು ಕೂಲಂಕುಶ ಚರ್ಚೆಯ ನಂತರ ವೈಜ್ಞಾನಿಕವಾಗಿ ನೋಡಿದಾಗ ವಾತಾವರಣದಲ್ಲಿನ ಹೆಚ್ಚಿನ ಉಷ್ಣಾಂಶವಿರುವುದೇ ಆಲೂಗಡ್ಡೆ ಬೆಳೆ ವಿಫಲವಾಗಲು ಕಾರಣ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆ ವಿಜ್ಞಾನಿಗಳ ವರದಿಯಂತೆ ವಾತಾವರಣದಲ್ಲಿ ಹೆಚ್ಚಿನ ಉಷ್ಣಾಂಶ ಇರುವುದು ಆಲೂಗಡ್ಡೆ ಬೆಳೆಯಲ್ಲಿ ಗಡ್ಡೆಗಳು ಬಿಡದೆ ಇರುವುದು ಹಾಗೂ ಇಳುವರಿ ಕುಂಠಿತವಾಗಿ ರೈತರಿಗೆ ಆರ್ಥಿಕವಾಗಿ ನಷ್ಟವಾಗಲು ಕಾರಣವಾಗಿರುತ್ತದೆ. ಆದ್ದರಿಂದ, ಸದರಿ ಪ್ರಕರಣವನ್ನು ವಿಶೇಷ ನೈಸರ್ಗಿಕ ವಿಕೋಪ ಬಾಧಿತ ಪ್ರದೇಶವೆಂದು ಪರಿಗಣಿಸಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಎಂ.ನಾಗರಾಜಯ್ಯ