ಹೊಸದಿಲ್ಲಿ: ಬಿಜೆಪಿಯೊಂದಿಗೆ ಮರುಮೈತ್ರಿ ಮಾಡಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ಸಿಡಿದೆದ್ದಿರುವ ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಅವರು ಗುರುವಾರ ಸಾಂಝಿ ವಿರಾಸತ್ ಬಚಾವೋ (ಸಂಯೋಜಿತ ಸಂಸ್ಕೃತಿ ಉಳಿಸಿ )ಎಂಬ ಹೆಸರಿನಲ್ಲಿ ಸಭೆಯೊಂದನ್ನು ಕರೆದಿದ್ದು 17 ವಿಪಕ್ಷಗಳು ಭಾಗಿಯಾಗಲಿವೆ.
ದೆಹಲಿಯ ಸಂವಿಧಾನಿಕ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಮಹತ್ವದ ಸಭೆ ಕರೆಯಲಾಗಿದ್ದು, ಕಾಂಗ್ರೆಸ್ ,ಎಸ್‌ಪಿ, ಡಿಎಂಕೆ, ತೃಣಮೂಲ ಕಾಂಗ್ರೆಸ್ , ಬಿಎಸ್‌ಪಿ ಮತ್ತಿತರ ಪ್ರಮುಖ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ.
ಮಾಧ್ಯಗಳಿಗೆ ಹೇಳಿಕೆ ನೀಡಿರುವ ಶರದ್ ಯಾದವ್ ‘ನಾನು ಕರೆದಿರುವ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಬುದ್ಧಿ ಜೀವಿಗಳು, ರೈತ ಮುಖಂಡರು, ದಲಿತ ಮತ್ತು ಬುಡಕಟ್ಟು ನಾಯಕರು ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದ್ದಾರೆ.
‘ಈ ಸಭೆ ದೇಶಕ್ಕಾಗಿ ಕರೆದಿದ್ದು ಸರ್ಕಾರದ ವಿರೋಧಿ ಸಭೆಯಲ್ಲ .ಭಾರತದ ಸಂಯೋಜಿತ ಸಮ್ಮಿಶ್ರ ಸಂಸ್ಕೃತಿ ಸಂವಿಧಾನದ ಪೀಠಿಕೆಯಾಗಿದ್ದು, ಅದು ಈಗ ಬೆದರಿಕೆಗೆ ಒಳಪಟ್ಟಿದೆ. ಅದನ್ನು ಉಳಿಸುವುದಕ್ಕಾಗಿ ಕಾರ್ಯ ಯೋಜನೆ ರೂಪಿಸುವುದು ಅಗತ್ಯವಾಗಿದೆ’ ಎಂದು ಯಾದವ್ ಉಲ್ಲೇಖೀಸಿದರು.
ಈ ಬಗ್ಗೆ ಜೆಡಿಯು ನಾಯಕ ಅಜಯ್ ಅಲೋಕ್ ಪ್ರತಿಕ್ರಿಯೆ ನೀಡಿ ‘ಶರದ್‌ರ ಈ ಸಭೆ ಆಶಾಢಭೂತಿತನದಿಂದ ಕೂಡಿದೆ.30 ವರ್ಷಗಳ ಹಿಂದೆ ಶರದ್ ಯಾದವ್ ಅವರು ಇಂತಹದ್ದೇ ಸಭೆಯನ್ನು ಕಾಂಗ್ರೆಸ್ ವಿರುದ್ಧ ಕರೆದಿದ್ದರು. ಈಗ ಕಾಂಗ್ರೆಸ್ ನೊಂದಿಗೆ ಸೇರಿಕೊಂಡು ಇನ್ನೊಂದು ಸಭೆ ಕರೆದಿದ್ದಾರೆ’ಎಂದು ಲೇವಡಿ ಮಾಡಿದ್ದಾರೆ.
ಶರದ್ ಯಾದವ್ ಅವರನ್ನು ಈಗಾಗಲೇ ಜೆಡಿಯು ಪಕ್ಷದ ರಾಜ್ಯಸಭಾ ನಾಯಕ ಸ್ಥಾನದಿಂದವಜಾಗೊಳಿಸಲಾಗಿದೆ.