ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಮಂಗಳವಾರ ಸಂಜೆಯ ನಂತರ ಇಲ್ಲಿಯವರೆಗೆ ರಾಜ್ಯದಲ್ಲಿ 17 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ.
ಸದ್ಯ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 277ಕ್ಕೇರಿದೆ. ಅದರಲ್ಲಿ 11 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನ ಫಾರ್ಮ ಕಂಪನಿಯ ಒಂಬತ್ತು ಜನರಿಗೆ ಹೊಸದಾಗಿ ಸೋಂಕು ದೃಢವಾಗಿದೆ. ಇದರೊಂದಿಗೆ ಮೈಸೂರಿನ 72 ವರ್ಷದ ವೃದ್ಧರೊಬ್ಬರಿಗೂ ಸೋಂಕು ತಾಗಿರುವುದು ದೃಢವಾಗಿದೆ.
ಅನಂತಪುರ ಮೂಲದ 59 ವರ್ಷದ ವ್ಯಕ್ತಿಯೋರ್ವನಿಗೆ ಸೋಂಕು ತಾಗಿದ್ದು, ಆತನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಗಲಕೋಟೆಯ ಮುಧೋಳದ ಮದರಸಾದಲ್ಲಿ ಪೊಲೀಸ್ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಗೂ ಸೋಂಕು ತಾಗಿರುವುದು ದೃಢವಾಗಿದೆ. ಬಾಗಲಕೋಟೆಯ ಮತ್ತೋರ್ವ ವ್ಯಕ್ತಿಗೆ ಸೋಂಕು ದೃಢವಾಗಿದ್ದು, ಅವರು ಸೋಂಕಿ ಸಂಖ್ಯೆ 186ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಕಲಬುರಗಿಯ ಒಂದು ವರ್ಷದ ಮಗುವಿಗೆ ಸೋಂಕು ತಾಗಿದ್ದು, ಅವರನ್ನು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟಾರೆಯಾಗಿ ಮೈಸೂರಿನಲ್ಲಿ 10 ಮಂದಿ, ವಿಜಯಪುರ, ಬೆಂಗಳೂರು, ಬಾಗಲಕೋಟೆ ತಲಾ ಇಬ್ಬರು, ಕಲಬುರಗಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಚಿಕ್ಕಬಳ್ಳಾಪುರದ 65 ವರ್ಷದ ವ್ಯಕ್ತಿ ಇಂದು ಕೋವಿಡ್-19 ಸೋಂಕಿನ ಕಾರಣ ಸಾವನ್ನಪ್ಪಿದ್ದಾರೆ. ( ಪಿ-250).
ರಾಜ್ಯದಲ್ಲಿ ಇದುವರೆಗೆ 75 ಜನರು ಗುಣಮುಖರಾಗಿದ್ದಾರೆ.