ಉಡುಪಿ: ಪರೀಕ್ಷಾ ಕೇಂದ್ರ ದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೋವಿಡ್-19 ವೈರಾಣುವಿನಿಂದ ರಕ್ಷಣೆ ಪಡೆದು ಸುಸೂತ್ರವಾಗಿ ಪರೀಕ್ಷೆ ಬರೆಯುವಂತಾ ಗಲು ಡಾ| ಜಿ. ಶಂಕರ್ ಅವರು ಉಡುಪಿ ಜಿಲ್ಲೆಯ 16,300 ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಅವರಿಗೆ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರು ಮಾಸ್ಕ್ ಗಳನ್ನು ಗುರುವಾರ ಹಸ್ತಾಂತರಿಸಿದರು.
ಡಿಡಿಪಿಐ ಶೇಷಶಯನ ಕಾರಿಂಜ ಅವರು ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಎಸೆಸೆಲ್ಸಿ ಪರೀಕ್ಷೆಯು ಜೂ. 25ರಿಂದ ಜು. 4ರ ವರೆಗೆ ನಡೆಯಲಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಫೇಸ್ ಮಾಸ್ಕ್ ಗಳನ್ನು ವಿತರಿಸಿದ ಜಿ. ಶಂಕರ್ ಅವರಿಗೆ ಇಲಾಖೆ ಅಭಾರಿಯಾಗಿದೆ ಎಂದರು.
ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯಾಧಿಕಾರಿ ಪ್ರಭಾಕರ ಮಿತ್ಯಂತಾಯ, ವಿಷಯ ಪರಿವೀಕ್ಷಕ ನಾಗರಾಜ್, ಜಿಲ್ಲಾ ಮೊಗ ವೀರ ಯುವ ಸಂಘ ಟನೆಯ ಜಿಲ್ಲಾಧ್ಯಕ್ಷ ಶಿವರಾಮ್ ಕೆ.ಎಂ., ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಶಂಕರ್ ಸಾಲ್ಯಾನ್, ಚಂದ್ರೇಶ್ ಪಿತ್ರೋಡಿ, ಸಂತೊಷ್ ಉಪಸ್ಥಿತರಿದ್ದರು.
ಇನ್ನೂ ಮೂರು ಜಿಲ್ಲೆಗಳಿಗೆ
ಸರ್ವರಿಗೂ ಆರೋಗ್ಯ ಮತ್ತು ಶಿಕ್ಷಣ ಲಭಿಸಿದಾಗ ಸಮಾಜ ಸದೃಢವಾಗುತ್ತದೆ. ಕೋವಿಡ್-19ರಿಂದಾಗಿ ಜನರ ಆರೋಗ್ಯ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಂಕಷ್ಟ ಎದುರಾಗಿದೆ. ಉಡುಪಿ ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆದು ಪುನರಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಬೇಕು. ಉಡುಪಿ ಜಿಲ್ಲೆಯ ಜತೆಗೆ ದ.ಕ., ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಿಸಲಾಗುವುದು.
– ಡಾ| ಜಿ. ಶಂಕರ್