ಬೆಂಗಳೂರು: ರಾಜ್ಯ ರಾಜಧಾನಿಗೆ ಕಾವೇರಿ ನೀರು ಪೂರೈಸುವ ಜಲಮಂಡಳಿಯು ಸಂಕಷ್ಟದ ಲ್ಲಿದ್ದು, ಮತ್ತೂಂದೆಡೆ ಬಿಬಿಎಂಪಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಅಧೀನದ ಸರ್ಕಾರಿ ಇಲಾಖೆಗಳು ಬರೋಬ್ಬರಿ 162 ಕೋಟಿ ರೂ. ನೀರಿನ ಶುಲ್ಕ ಪಾವತಿಸಲು ಬಾಕಿ ಉಳಿಸಿಕೊಂಡಿ ರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೀರು ಸರಬರಾಜಿನಿಂದ ಬರುವ ಮೊತ್ತವೇ ಜಲಮಂಡಳಿಯ ಆದಾಯವಾಗಿದ್ದು, ಇದರಲ್ಲೇ ಸಂಸ್ಥೆ ನಿರ್ವಹಣೆ ಮಾಡಬೇಕಿದೆ. ಆದರೆ, ಸರ್ಕಾರಿ ಇಲಾಖೆಗಳಿಂದ ಬಾಕಿ ಉಳಿಸಿಕೊಂಡಿರುವ 162 ಕೋಟಿ ರೂ. ನೀರಿನ ಮೊತ್ತ ವಸೂಲಿ ಮಾಡುವುದೇ ದೊಡ್ಡ ತಲೆನೋವಾಗಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ಹತ್ತಾರು ಬಾರಿ ನೋಟಿಸ್ ಕಳುಹಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಈ ಪೈಕಿ ಬಿಬಿಎಂಪಿ ಹಲವು ವರ್ಷ ಗಳಿಂದ ಬಾಕಿ ಉಳಿಸಿಕೊಂಡಿದ್ದ 7 ಕೋಟಿ ರೂ.ಗೆ ಬಡ್ಡಿ ಮೊತ್ತವೇ 14 ಕೋಟಿ ರೂ. ಆಗಿದೆ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್.
ರಾಜ್ಯದ ಇಲಾಖೆಗಳಿಂದ 111 ಕೋಟಿ ರೂ. ಬಾಕಿ: ರಾಜ್ಯ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳು 111 ಕೋಟಿ ರೂ. ಬಾಕಿ ಉಳಿಸಿಕೊಂಡರೆ, ಕೇಂದ್ರದ ಅಧೀನದ ಇಲಾಖೆಗಳಿಂದ 50.94 ಕೋಟಿ ರೂ. ವಸೂಲು ಮಾಡಬೇಕಿದೆ. ಬಿಬಿಎಂಪಿ 21.45 ಕೋಟಿ ರೂ. ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಅಧೀನದಲ್ಲಿರುವ ಪೊಲೀಸ್ ಕ್ವಾಟ್ರಸ್, ವಿವಿಗಳು ಅತ್ಯಧಿಕ ನೀರಿನ ಬಿಲ್ ನೀಡಲು ಬಾಕಿಯಿದ್ದು, ಕಂದಾಯ, ಪಿಡಬ್ಲೂéಡಿ, ಆರೋಗ್ಯ ಇಲಾಖೆ ಸೇರಿದಂತೆ 51.29 ಕೋಟಿ ರೂ. ಉಳಿಸಿಕೊಂಡಿದ್ದು, ಬಡ್ಡಿ 29.9 ಕೋಟಿ ರೂ. ಸೇರಿ 80.38 ಕೋಟಿ ರೂ. ನೀಡಬೇಕಿದೆ.
ರಕ್ಷಣಾ ಇಲಾಖೆಯು 26.33 ಕೋಟಿ ಮೊತ್ತದ ನೀರು ಬಳಸಿಕೊಂಡಿದ್ದು, ಬಡ್ಡಿ 1.9 ಕೋಟಿ ರೂ. ಸೇರಿ 28.32 ಕೋಟಿ ರೂ. ಬರಬೇಕಿದೆ. ಕೇಂದ್ರ ಸರ್ಕಾರದ ಅಧೀನ ಇಲಾಖೆಗಳೂ 18.64 ಕೋಟಿ ರೂ. ನೀರಿನ ಬಿಲ್ ಕಟ್ಟಿಲ್ಲ. ಇದಕ್ಕೆ 3.97 ಕೋಟಿ ರೂ. ಬಡ್ಡಿಯಾಗಿದ್ದು, 22.62 ಕೋಟಿ ರೂ. ಪಾವತಿಸಬೇಕಿದೆ. ಇನ್ನು ಶಾಸನಬದ್ದ ಸಂಸ್ಥೆಗಳು 5 ಕೋಟಿ ರೂ. ನೀರಿನ ಬಿಲ್‌ಗೆ 3 ಕೋಟಿ ರೂ. ಬಡ್ಡಿ ಸೇರಿ ಒಟ್ಟು 9 ಕೋಟಿ ರೂ. ನೀರಿನ ಬಿಲ್ ಪಾವತಿಸಬೇಕು. 2013ರಲ್ಲಿ ಜಲ ಮಂಡಳಿ ಪಾವತಿಸುತ್ತಿದ್ದ 35 ಕೋಟಿ ರೂ. ವಿದ್ಯುತ್ ಶುಲ್ಕ ಸದ್ಯ 70 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಹಲವು ವರ್ಷಗಳಿಂದ ಜನರಿಗೆ ಹೊರೆಯಾಗುತ್ತಿದೆ ಎಂಬ ಕಾರಣಕ್ಕೆ ನೀರಿನ ಶುಲ್ಕ ಹೆಚ್ಚಿಸಿಲ್ಲ. ಹಾಗಾಗಿ, ಮಂಡಳಿಗೆ ಬರುವ ಆದಾಯದ ಮೊತ್ತಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿದೆ.
ನೀರಿನ ಬಿಲ್ ಮನ್ನಾ ಮಾಡಲು ಮನವಿ: ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಸ್ವಾಮ್ಯದ ಪ್ರತಿ ಇಲಾಖೆ, ಸಂಸ್ಥೆಗಳಿಗೆ ಜಲಮಂಡಳಿಯಿಂದ ಹಲವು ಬಾರಿ ನೋಟಿಸ್ ಕಳುಹಿಸಿ ಬಾಕಿ ಮೊತ್ತ ಪಾವತಿಸುವಂತೆ ಎಚ್ಚರಿಸಲಾಗಿದೆ. ಆದರೂ, ಇದುವರೆಗೂ ಬಾಕಿ ನೀರಿನ ಮೊತ್ತ ಪಾವತಿಯಾಗಲಿಲ್ಲ. ಜಲಮಂಡಳಿ ಇಲಾಖೆಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಲು ಆಗುವುದಿಲ್ಲ. ಇದನ್ನು ಅರಿತ ಸರ್ಕಾರಿ ಇಲಾಖೆಗಳು ಜಲಮಂಡಳಿ ಬಿಲ್ ಪಾವತಿಸಲು ನಿರ್ಲಕ್ಷಿಸಿವೆ. ಕೆಲವು ಇಲಾಖೆಗಳು ಸಮಯಾವಕಾಶ ಕೇಳುತ್ತಿದೆ. ಮತ್ತೆ ಕೆಲವು ಬಿಲ್ ಮನ್ನಾಕ್ಕೆ ಮನವಿ ಮಾಡಿವೆ.
1,300 ಕೋಟಿ ರೂ. ಆದಾಯ: 10.50 ಲಕ್ಷ ಮನೆಗಳಿಗೆ ಕಾವೇರಿ ನೀರನ್ನು ಜಲಮಂಡಳಿ ಪೂರೈಕೆ ಮಾಡುತ್ತಿದೆ. ನೀರು ಪೂರೈಕೆ ಶುಲ್ಕದಿಂದ ಜಲಮಂಡಳಿಯು ತಿಂಗಳಿಗೆ ಸರಾಸರಿ 109 ಕೋಟಿ ರೂ. ಆದಾಯಗಳಿಸುತ್ತದೆ. ವಾರ್ಷಿಕ 1,300 ಕೋಟಿ ರೂ. ಮಂಡಳಿಗೆ ಆದಾಯ ಬರುತ್ತಿದೆ. ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ ಬಳಿಕ 90 ಕೋಟಿ ರೂ. ವಿದ್ಯುತ್ ಶುಲ್ಕಕ್ಕೆ ಮೀಸಲಿಡಲಾಗುತ್ತಿದೆ.
ಜಲಮಂಡಳಿಗೆ ಬರಬೇಕಿರುವ ಬಾಕಿ ನೀರಿನ ಮೊತ್ತ ಸಂಗ್ರಹಿಸಲು ನಮ್ಮ ಸಿಬ್ಬಂದಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಬಿಲ್ ಬಾಕಿ ಉಳಿಸಿ ಕೊಂಡಿರುವ ಇಲಾಖೆಗಳ ಮುಖ್ಯಸ್ಥರೇ ಜಲಮಂಡಳಿ ಸ್ಥಿತಿ-ಗತಿ ಅರ್ಥ ಮಾಡಿಕೊಂಡು ಶುಲ್ಕ ಪಾವತಿಸಬೇಕು.
-ಎನ್.ಜಯರಾಮ್, ಅಧ್ಯಕ್ಷ, ಜಲಮಂಡಳಿ
-ಅವಿನಾಶ ಮೂಡಂಬಿಕಾನ