ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಸಂಕಷ್ಟ ಅನುಭವಿಸಿರುವ ಶ್ರಮಿಕ ವರ್ಗಕ್ಕೆ ಸರಕಾರ ಘೋಷಿಸಿರುವ 1610 ಕೋಟಿ ರೂ. ಪ್ಯಾಕೇಜ್ ದೋಖಾ ಪ್ರಾಜೆಕ್ಟ್ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಕೊಡುತ್ತೇವೆ ಎಂದರು. ಆದರೆ ಎಷ್ಟು ಜನರಿಗೆ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದರು. ನೆರೆ ಪರಿಹಾರದಲ್ಲೂ ಜನರಿಗೆ ಮೋಸವಾಗಿದೆ. ಅದೇ ಈಗಲೂ ಮುಂದುವರಿಯುತ್ತದೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರೈತರ ಸಾಲಮನ್ನಾ ಮಾಡುವಾಗ ಸರಿಯಾದ ಮಾಹಿತಿಯೊಂದಿಗೆ ನೀಡಿದ್ದೆ. ಆದರೆ ಈಗ ಯಾರು ಅರ್ಹರು, ಫಲಾನುಭವಿಗಳ ಆಯ್ಕೆ ಮಾನದಂಡ, ಮಾರ್ಗಸೂಚಿ ಇದ್ಯಾವುದೂ ಇಲ್ಲದೆ ಬರೀ ಘೋಷಣೆ ಮಾಡಲಾಗಿದೆ ಹಾಗಾಗಿ ಇದು ಘೋಷಣೆಯಾಗಿಯೇ ಇರಲಿದೆ ಎಂದರು.
ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಕೋವಿಡ್-19 ಹೆಸರಿನಲ್ಲಿ ಜನರಿಗೆ ದೋಖಾ ಮಾಡುತ್ತಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದರು.
ಬೆಳಗಾವಿಯ ಗಡಿಯಲ್ಲಿ 3-4 ಕಿ.ಮೀಟರ್ ನಲ್ಲಿ ಸಾವಿರಾರು ಕಾರ್ಮಿಕರು ಸೇರಿದ್ದಾರೆ. ಆದರೆ ಅವರಿಗೆ ಸರಕಾರದಿಂದ ಸರಿಯಾದ ನಿರ್ದೇಶನ ನೀಡುತ್ತಿಲ್ಲ. ಒಬ್ಬೊಬ್ಬ ಮಂತ್ರಿಗಳು ಅವರಿಗೆ ಬೇಕಾದ ರೀತಿ ಕೆಲಸ ಮಾಡುತ್ತಿದ್ದಾರೆ. ಇದು ಟೀಕೆ ಮಾಡುವ ಸಮಯವಲ್ಲ. ನಾನು ವಾಸ್ತವಾಂಶ ಹೇಳುತ್ತಿದ್ದೇನೆ. ಜನರಿಗೆ ಟೋಪಿ ಹಾಕುತ್ತಿದ್ದಾರೆ ಎಂದರು.