Advertisement

ಜಿಲ್ಲೆಯ 1600 ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲ!

02:49 PM Oct 14, 2017 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜಿಲ್ಲಾಯಲ್ಲಿರುವ ಸರ್ಕಾರಿ ಶಾಲಾ ಕೊಠಡಿಗಳ ಅಸ್ತಿತ್ವವನ್ನೇ ಅಲುಗಾಡುವಂತೆ ಮಾಡಿದೆ. ಹೌದು, ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಬರೋಬ್ಬರಿ 1,600 ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಮಕ್ಕಳು ಕೂತು ಪಾಠ, ಪ್ರವಚನ ಕೇಳಲು ಸುರಕ್ಷತೆಯಿಂದ ಕೂಡಿಲ್ಲ ಎಂಬ ಅಘಾತಕಾರಿ ಮಾಹಿತಿ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಬಯಲಾಗಿದೆ.

Advertisement

ಈಗಾಗಲೇ ಮೂಲ ಸೌಕರ್ಯಗಳ ಕೊರತೆಯಿಂದ ಸೊರಗಿ ಮಕ್ಕಳ ಹಾಜರಾತಿ ಕುಸಿತದಿಂದ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರಿ ಶಾಲೆಗಳು ಪರದಾಡುತ್ತಿವೆ. ಈ ಸಂದರ್ಭ ಪಾಠ ಮಾಡುವ ಕೊಠಡಿಗಳು ಅಭದ್ರತೆಯಿಂದ ಕೂಡಿರುವುದು ವಿದ್ಯಾರ್ಥಿ, ಪೋಷಕರಲ್ಲಿ ತೀವ್ರ ಆತಂಕಕ್ಕೀಡು ಮಾಡಿದೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕಳುಹಿಸಲು ವಿದ್ಯಾರ್ಥಿ, ಪೋಷಕರು ಹಿಂದೇಟು ಹಾಕುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಇನ್ನೂ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದ ಸರ್ಕಾರಿ ಶಾಲಾ ಕೊಠಡಿಗಳು ದುರಸ್ತಿಗೆ ಎದುರು ನೋಡುತ್ತಿದ್ದರೂ, ಆಯಾ ಕ್ಷೇತ್ರಗಳ ಚುನಾಯಿತ ಜನಪ್ರತಿನಿಧಿಗಳು ದುರಸ್ತಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಇದು ವಿದ್ಯಾರ್ಥಿ, ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ. 

ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ದುರಸ್ತಿ ಮಾಡಬೇಕಾದ ಶಾಲಾ ಕೊಠಡಿಗಳನ್ನು ಸಮೀಕ್ಷೆ ನಡೆಸಿದ್ದಾರೆ. ಅದರ ಅಂದಾಜು ವೆಚ್ಚದ ಕ್ರಿಯಾ ಯೋಜನೆ ಕ್ಷೇತ್ರಗಳ ಶಾಸಕರಿಗೆ, ಸಂಸದರಿಗೆ ಸಲ್ಲಿಸಿದ್ದಾರೆ. ಆದರೆ ಯಾವ ಶಾಸಕರೂ ಕೊಠಡಿಗಳ ದುರಸ್ತಿಗೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಜಿಲ್ಲೆಯ ಜಿಪಂನಲ್ಲಿ ನಡೆಯುವ ಉಸ್ತುವಾರಿ ಸಚಿವ ತ್ರೆಮಾಸಿಕ ಸಭೆ, ಜಿಪಂ ಅಧ್ಯಕ್ಷರು ನಡೆಸುವ ಕೆಡಿಪಿ ಸಭೆಗಳಲ್ಲಿ ಜಿಲ್ಲೆಯ ಸರ್ಕಾರಿ ಶಾಲಾ ಕೊಠಡಿಗಳ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆದರೂ ಕಾಟಾಚಾರದಂತೆ ಇರುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲಾ ಕೊಠಡಿಗಳ ಅವ್ಯವಸ್ಥೆ ಬಗ್ಗೆ ಗಮನ ಸೆಳೆದರೂ ದುರಸ್ತಿಗೆ ಅಗತ್ಯ ಅನುದಾನ ಒದಗಿಸುವಲ್ಲಿ ಜಿಪಂ ಆಡಳಿತ ವಿಫ‌ಲವಾಗಿದೆ.

Advertisement

ಓಬಿರಾಯನ ಕಾಲದ ಕೊಠಡಿಗಳು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಹಲವು ದಶಕಗಳ ಹಿಂದೆ ನಿರ್ಮಿಸಿದ್ದು, ಹಲವು ಶಾಲೆಗಳು ಶತಮಾನ ಪೂರೈಸಿವೆ. ಇನ್ನೂ ಕೆಲವು ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಈಗಾಗಲೇ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಛಾವಣಿಗಳು ತೂತುಗಳು ಬಿದ್ದು ಮಳೆ ಬಂದಾಗ ಕೊಠಡಿಗಳು ಜಲಾವೃತಗೊಳ್ಳುತ್ತವೆ. ಗ್ರಾಮೀಣ ಭಾಗದಲ್ಲಿ ಶಾಲಾ ಕೊಠಡಿಗಳು ಅವ್ಯವಸ್ಥೆಯಿಂದ ಕೂಡಿರುವ ಪರಿಣಾಮ ಸದ್ಯ ಮಳೆಗೆ ಕೊಠಡಿಗಳು ನೆನೆಯುತ್ತಿದ್ದು, ವಿದ್ಯಾರ್ಥಿಗಳು ಕೂರಲು ಭಯಪಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 1,600ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಬೇಕಾಗಿದೆ. ಇತ್ತೀಚೆಗೆ ಸತತ ಮಳೆಯಾಗುತ್ತಿರುವ ಕಾರಣ ದುರಸ್ತಿಗೊಳ್ಳಬೇಕಾದ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಕಷ್ಟವಾಗುತ್ತದೆ. ದುರಸ್ತಿಗೆ ಅನುದಾನದ ಕೊರತೆ ಇದೆ. ಸದ್ಯ ದಸರಾ ರಜೆಗಳು ಇರುವುದರಿಂದ ಮಕ್ಕಳು ಶಾಲೆಗಳಿಗೆ ಬರುತ್ತಿಲ್ಲ. ಮಳೆ ಇದೇ ರೀತಿ ಮುಂದುವರಿದರೆ ಕಷ್ಟವಾಗುತ್ತದೆ. ಕೊಠಡಿಗಳ ದುರಸ್ತಿಗೆ ಅನುದಾನ ನೀಡುವಂತೆ ಇಲಾಖೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದ್ದೇವೆ. 
ಜಯರಾಮ ರೆಡ್ಡಿ, ಪ್ರಭಾರಿ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 44 ಕೊಠಡಿಗಳು ತೀರಾ ಹದಗೆಟ್ಟಿವೆ. ಅವುಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಭಯವಾಗುತ್ತದೆ. ಉಳಿದಂತೆ ಮಳೆ ಬಂದರೆ ಸೋರಿಕೆ, ಬಿರುಕು ಬಿಟ್ಟಿರುವ ಕೊಠಡಿಗಳಿಗೆ ಲೆಕ್ಕವಿಲ್ಲ. ಸದ್ಯ ಮಳೆಯಾಗುತ್ತಿರುವ ಕಾರಣ ದುಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಪಾಠ ಪ್ರವಚನ ಮಾಡುತ್ತಿಲ್ಲ. ಕೊಠಡಿಗಳ ದುರಸ್ತಿಗೆ ಬೇಕಾದ ಅನುದಾನದ ಬಗ್ಗೆ ಇಲಾಖೆಗೆ
ಪ್ರಸ್ತಾವನೆ ಸಲ್ಲಿಸಿದ್ದೇವೆ. 
ಶಾಂತಲಾ, ಚಿಕ್ಕಬಳ್ಳಾಪುರ ಬಿಇಒ

ದುರಸ್ತಿಗೆ ಬೇಕು ಕೋಟ್ಯತರ ರೂ. ಹಣ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ ಕೋಟ್ಯಂತರ ರೂ. ಅನುದಾನ ಅವಶ್ಯ. ಆದರೆ, ಇಷ್ಟೊಂದು ಪ್ರಮಾಣದ ಅನುದಾನವನ್ನು ಸರ್ಕಾರ ಒಂದೇ ಬಾರಿ ನೀಡುವುದು ಅನುಮಾನವಾಗಿದೆ. ಶಾಲಾ ಕೊಠಡಿಗಳ ದುರಸ್ತಿಗೆ ಸರ್ಕಾರ ಇಲಾಖೆ ಮೂಲಕ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಿದ್ದು, ಸರ್ಕಾರ ಅನುದಾನ ನೀಡಿದಾಗ ಕೊಠಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೂ ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿರುವ ಪರಿಣಾಮ ಕೊಠಡಿಗಳ ದುರಸ್ತಿಗೆ ಬರುತ್ತಿದ್ದ ಬಹುಪಾಲು ಹಣ ನಿಂತು ಹೋದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next