Advertisement

ಶಾಂತಿಯುತ ಮತದಾನಕ್ಕೆ ಸಿದ್ಧತೆ: ನರೆಯಿನ್‌ಲಾಲ್‌

10:22 AM May 10, 2018 | |

ಸುಳ್ಯ: ಕ್ಷೇತ್ರದಲ್ಲಿ 16 ನಕ್ಸಲ್‌ ಬಾಧಿತ, 48 ಅತಿ ಸೂಕ್ಷ್ಮ, 43 ಸೂಕ್ಷ ಮತಗಟ್ಟೆಗಳಿದ್ದು, ಅಲ್ಲೆಲ್ಲ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ವೀಕ್ಷಕ ನರೈನ್‌ಲಾಲ್‌ ಹೇಳಿದರು. ಮೇ 12ರ ಮತದಾನದ ಸಿದ್ಧತೆಗಳ ಕುರಿತು ಮಾತನಾಡಿದ ಅವರು, ಈ ಮತಗಟ್ಟೆಗಳಲ್ಲಿ ಓರ್ವ ಪೊಲೀಸ್‌ ಸಿಬಂದಿ, ನಾಲ್ವರು ಅರೆಸೇನಾ ಪಡೆ ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಆವಶ್ಯಕ ಇರುವೆಡೆ ವೆಬ್‌ ಕೆಮರಾ, ವಿಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಕ್ಷೇತ್ರದಲ್ಲಿ 1,98,682 ಮತದಾರರಿದ್ದು, 98,914 ಪುರುಷ, 99,768 ಮಹಿಳೆಯರು ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 713 ಪುರುಷ ಮತ್ತು 416 ಮಹಿಳೆಯರ ಸಹಿತ 1,129 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಇವರಿಗೆ ಮತಗಟ್ಟೆ ಕೊಠಡಿಗೆ ತೆರಳಲು ಗಾಲಿಕುರ್ಚಿ ವ್ಯವಸ್ಥೆ ಮಾಡಲಾಗಿದೆ. 50 ಮತಗಟ್ಟೆಗಳಲ್ಲಿ 50 ಗಾಲಿ ಕುರ್ಚಿ ರವಾನಿಸಲಾಗಿದೆ ಎಂದು ನುಡಿದರು.

ಮಹಿಳಾ ಮತಗಟ್ಟೆ
ಚುನಾವಣಾಧಿಕಾರಿ ಬಿ.ಟಿ ಮಂಜುನಾಥ್‌ ಮಾತನಾಡಿ, ಕ್ಷೇತ್ರದಲ್ಲಿ 229 ಮತಗಟ್ಟೆಗಳಿವೆ. ಬೆಳಂದೂರಿನಲ್ಲಿ ಒಂದು ಹೆಚ್ಚುವರಿ ಮತಗಟ್ಟೆ ಸೇರ್ಪಡೆ ಆಗಿವೆ. ಸ.ಹಿ.ಪ್ರಾ. ಶಾಲೆ ಗುತ್ತಿಗಾರು (ಪೂ.ಭಾ.) ಮತಗಟ್ಟೆಯನ್ನು ಮಹಿಳಾ ಮತಗಟ್ಟೆ ಎಂದು ಗುರುತಿಸಿದ್ದು, ಇಲ್ಲಿ ಜಿ.ಪಂ. ವತಿಯಿಂದ ವಿಶೇಷ ರೀತಿಯಲ್ಲಿ ಅಲಂಕಾರ ನಡೆಯಲಿದೆ. ಮಹಿಳಾ ಮತದಾರರು ಹೆಚ್ಚಿರುವ ಕಾರಣ, ಇಲ್ಲಿನ ಮತಗಟ್ಟೆಯಲ್ಲಿ ಮಹಿಳಾ ಸಿಬಂದಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ. ಮತಗಟ್ಟೆ 114 ಸ.ಹಿ.ಪ್ರಾ. ಶಾಲೆ ಸುಬ್ರಹ್ಮಣ್ಯ (ಮ.ಭಾ.) ಇಲ್ಲಿ ಜನಾಂಗೀಯ ಮತ ಗಟ್ಟೆ (ಎತ್ನಿಕ್‌ ಪೋಲಿಂಗ್‌ ಸ್ಟೇಷನ್‌) ಎಂದು ವರ್ಗೀಕರಿಸಲಾಗಿದೆ. ಇಲ್ಲಿ ಪ. ಜಾತಿ, ಪಂಗಡದ ಮತದಾರರೇ ಅಧಿಕ ಸಂಖ್ಯೆಯಲಿದ್ದಾರೆ. ಇದನ್ನು ಸಾಂಪ್ರದಾಯಿಕ ನೆಲೆಯಲ್ಲಿ ಅಲಂಕರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ನೆಟ್‌ವರ್ಕ್‌ಗೆ ಕ್ರಮ
ಮತದಾನ ಆರಂಭಕ್ಕೆ ಮೊದಲು ಏಜೆಂಟರ ಸಮ್ಮುಖದಲ್ಲಿ 50 ಅಣಕು ಮತದಾನ ಮಾಡಿ ಮತಯಂತ್ರದ ಗುಣಮಟ್ಟದ ಬಗ್ಗೆ ಖಾತರಿ ಪಡಿಸಲಾಗುವುದು. ಏಜೆಂಟರು ಮತದಾನ ಕೇಂದ್ರದಲ್ಲಿ ಮುಂಚಿತವಾಗಿಯೇ ಇರಬೇಕು ಎಂದರು.

ಮೊಬೈಲ್‌ ರೇಂಜ್‌ ಇಲ್ಲದ ಮತಗಟ್ಟೆಗಳಿಗೆ ತಾತ್ಕಾಲಿಕ ದೂರವಾಣಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಸಂಖ್ಯೆ 116 ಕೊಯಿಕುಳಿ, 169 ಜಟ್ಟಿಪಳ್ಳ, 174 ಸಾಮರ್ಥ್ಯ ಸೌಧ, 178 ಸ.ಪ.ಪೂ. ಕಾಲೇಜು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸಿಬಂದಿಗೆ ಊಟ-ಉಪಾಹಾರಕ್ಕಾಗಿ ಅಕ್ಷರ ದಾಸೋಹ ನೌಕರರು ಕರ್ತವ್ಯ ನಿರ್ವಹಿಸಲಿದ್ದಾರೆ. 

Advertisement

ಬೆಳಗ್ಗೆ 7ರಿಂದ ಸಂಜೆ 6
ಮತದಾನ ಸಮಯವನ್ನು ಬೆಳಗ್ಗೆ 7ರಿಂದ ಸಂಜೆ 6ರ ತನಕ ನಿಗದಿ ಪಡಿಸಿದ್ದು, ಸಮಯ ವಿಸ್ತರಣೆಗೆ ಅವಕಾಶ ಇಲ್ಲ. ಮತದಾರರು ಆಯೋಗ ಸೂಚಿಸಿದ 12 ಗುರುತು ಪತ್ರಗಳ ಪೈಕಿ ಯಾವುದಾದರೂ ಒಂದನ್ನು ಅಥವಾ ಚುನಾವಣಾ ಆಯೋಗ ನೀಡಿದ ಮತಚೀಟಿಯೊಂದಿಗೆ ಬಂದು ಮತ ಚಲಾಯಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next