Advertisement

ಕಾಂಗ್ರೆಸ್‌ನ 16 ಶಾಸಕರು ಬಿಜೆಪಿಯತ್ತ ?

09:20 AM Oct 14, 2017 | Team Udayavani |

ಉಡುಪಿ: ರಾಜ್ಯದಲ್ಲಿ ಮುಂದಿನ ಮೇ ಒಳಗೆ ಹೊಸ ಸರಕಾರ ಪ್ರತಿಷ್ಠಾಪನೆಯಾಗಬೇಕು. ದಿನ ಹತ್ತಿರ ಬರುತ್ತಿರುವಂತೆ ಎರಡೂ ಪಕ್ಷಗಳಲ್ಲಿ ತುರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಚುನಾವಣೆ ಹತ್ತಿರ ಬರುವಾಗ ಪಕ್ಷಾಂತರ ಸಾಮಾನ್ಯ. ಇದಕ್ಕೆ ರಂಗತಾಲೀಮು ಈಗಾಗಲೇ ಆರಂಭವಾದಂತಿದೆ. ನಂಬಲರ್ಹ ಮಾಹಿತಿಯೊಂದರ ಪ್ರಕಾರ ರಾಜ್ಯದ 16 ಶಾಸಕರು ಬಿಜೆಪಿಗೆ ಬರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಒಂಬತ್ತು ಮಂದಿ ಸಚಿವರು ಎನ್ನಲಾಗುತ್ತಿದೆ.

Advertisement

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಎರಡು ಜಿಲ್ಲೆಗಳ ಪ್ರಭಾವಿ ಸಚಿವರು, ಒಂದು ಜಿಲ್ಲೆಯ ಸಚಿವ ಸಮಾನ ಘನತೆಯ ವ್ಯಕ್ತಿ ಗುಂಪಿನಲ್ಲಿದ್ದಾರೆಂದು ಉನ್ನತ ಮೂಲಗಳು ತಿಳಿಸುತ್ತಿವೆ. ಬಿಜೆಪಿಗೆ ಬರುವ ಸಚಿವರು ಬಿಜೆಪಿ ವಿರುದ್ಧ ಖಾರವಾಗಿ ಮಾತನಾಡುತ್ತಿಲ್ಲ, ಬಿಜೆಪಿಯಲ್ಲಿಯೂ ‘ಅವರು ಮಾತ್ರ ಬರಲೇಬಾರದು’ ಎಂದು ತೊಡೆತಟ್ಟುವ ಕಾರ್ಯಕರ್ತರೂ ಇಲ್ಲ. ಹೀಗೆ ‘ಆತ ಕೊಟ್ಟ ಉಪದ್ರ ಎಷ್ಟಪ್ಪ? ಆತ ಮಾತ್ರ ಬರಬಾರದು’ ಎಂದು ಬಿಜೆಪಿ ಕಾರ್ಯಕರ್ತರಿಂದ ಅನಿಸಿಕೊಂಡಿದ್ದ ಅನ್ಯ ಪಕ್ಷಗಳ ನಾಯಕರೇ ಬಿಜೆಪಿ ಪಾಳಯಕ್ಕೆ ಬಂದು ನಾಯಕರಾಗಿ ವೇದಿಕೆಯಲ್ಲಿದ್ದಾರೆ. ಈಗ ಸುದ್ದಿಯ ಚಾಲ್ತಿಯಲ್ಲಿರುವವರು ಇಂತಹ ಸ್ಥಿತಿಯಲ್ಲಿಲ್ಲ.

ಸುರಕ್ಷಿತ ಮಾರ್ಗದತ್ತ …
ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದೇ, ಇಲ್ಲವೆ ಎನ್ನುವುದಕ್ಕಿಂತಲೂ ವೈಯಕ್ತಿಕ ಲಾಭ-ನಷ್ಟಗಳ ಕುರಿತಾಗಿನ ಲೆಕ್ಕಾಚಾರವೇ ಹೆಚ್ಚುತ್ತಿದೆ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬರದೆ ಇದ್ದರೆ, ಶಾಸಕರಾಗಿ ಆಯ್ಕೆಯಾದರೂ ಮುಂದೇನು ಎಂಬ ಪ್ರಶ್ನೆ ಇವರನ್ನು ಕಾಡುತ್ತಿದೆ. ಚುನಾವಣೆಯಲ್ಲಿ ಹವಾ ಏಳುವಾಗ ಯಾವುದೂ ಲೆಕ್ಕಕ್ಕೆ ಸಿಗದೆ ಇರುವ ಸಾಧ್ಯತೆ ಇದೆ. ಹೀಗಾದರೆ ಸ್ಪರ್ಧಿಸಿಯೂ ಸಂಕಷ್ಟಕ್ಕೆ ಈಡಾಗುವುದಕ್ಕಿಂತ ಸುರಕ್ಷಿತವಾಗಿ ಮತ್ತೆ ಐದು ವರ್ಷ ಬದುಕಬಹುದಲ್ಲ ಎಂಬುದು ಲೆಕ್ಕಾಚಾರ. ಈಗೀಗ ರಾಜಕೀಯದಲ್ಲಿರುವವರು ಉದ್ಯಮಿಗಳಾಗಿರುವುದು ಸಾಮಾನ್ಯ. ತಮ್ಮ ತಮ್ಮ ಉದ್ಯಮಗಳನ್ನು ಪೋಷಿಸಬೇಕಾದರೆ ರಾಜಕೀಯ ಬಲವೂ ಬೇಕಾಗುತ್ತದೆ ಎನ್ನುವುದು ಜೀವನಾನುಭವ. ರಾಜಕೀಯ ಕೃಪಾಪೋಷಣೆ ಇಲ್ಲದೆ ಇದ್ದರೆ ಉದ್ಯಮವೂ ನಷ್ಟಕ್ಕೀಡಾಗುವ ಸಾಧ್ಯತೆಗಳೂ ಅಲ್ಲಲ್ಲಿ ಕಂಡುಬರುತ್ತವೆ. ತಮ್ಮ ವಹಿವಾಟುಗಳನ್ನು ಹೆಚ್ಚಿಗೆ ಮಾಡಿಕೊಳ್ಳಲೂ, ‘ಅಕ್ರಮ’ಗಳನ್ನು ಸಕ್ರಮ ಮಾಡಿಕೊಳ್ಳಲೂ ರಾಜಕೀಯ ಬಲ ಸಹಕಾರಿಯಾಗುತ್ತದೆ. ಇವೆಲ್ಲವನ್ನು ಗಮನಿಸಿದಾಗ ಅಧಿಕಾರಕ್ಕೆ ಬರುವ ಪಕ್ಷವನ್ನು ಹಿಡಿದು ಅಧಿಕಾರಕ್ಕೇರಲು ಲೆಕ್ಕಾಚಾರ ಕೆಲವರಿಂದ ನಡೆಯುತ್ತಿದೆ ಎಂದೆನಿಸುತ್ತಿದೆ. ಬಿಜೆಪಿ ಕಡೆಯಿಂದ ನೋಡುವುದಾದರೆ ಈ ಎಲ್ಲ ಕ್ಷೇತ್ರಗಳೂ ಬಿಜೆಪಿಗೆ ಕಣ್ಣು ಮುಚ್ಚಿ ಗೆಲುವು ಸಾಧಿಸುವಂಥದ್ದಲ್ಲ. ಮೂರ್‍ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಜೆಡಿಎಸ್‌ ಗಟ್ಟಿಯಾಗಿದೆ. ಸುಲಭದಲ್ಲಿ ಗೆಲುವಿನ ಜತೆ ಕಾಂಗ್ರೆಸ್‌ ಜಂಘಾಬಲ ಕುಸಿಯುವಂತೆ ಮಾಡುವುದು ರಣತಂತ್ರವಾಗಿದೆ.

ಬಿಜೆಪಿಗೆ ಸೇರುವುದಿಲ್ಲ
ಕಾಂಗ್ರೆಸ್‌ ಪಕ್ಷದ ಸ್ಥಳೀಯ ನಾಯಕರನ್ನು ಕೇಳಿದಾಗ ಕೆಲವರು ಅಲ್ಲಗಳೆಯುತ್ತಾರೆ, ಕೆಲವರು ಇಲ್ಲವೆನ್ನುವುದಿಲ್ಲ. ‘ಪಕ್ಷ ಮತ್ತೆ ಅಧಿಕಾರಕ್ಕೇರುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಹೀಗಿರುವಾಗ ನಮ್ಮವರು ಬಿಜೆಪಿಗೆ ಸೇರುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳುತ್ತಾರೆ ಕೆಲವು ನಾಯಕರು. 

‘ಎಲ್ಲವೂ ವರಿಷ್ಠರು ಹೇಳಿದಂತೆ ನಡೆಯುತ್ತದೆ. ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎನ್ನುವುದು ರಾಜ್ಯದ ನಾಯಕರ ಮಾತಿನಂತೆ ನಡೆಯದೆ ಕೇಂದ್ರದ ವರಿಷ್ಠರ ತೀರ್ಮಾನದಂತೆ ನಡೆಯಲಿದೆ’ ಎನ್ನುತ್ತಾರೆ ಬಿಜೆಪಿ ಸ್ಥಳೀಯ ನಾಯಕರು. ಡಿಸೆಂಬರ್‌ನಲ್ಲಿ ನಾಯಕರ “ಹೆಜ್ಜೆ’ ಗೋಚರಕ್ಕೆ ಬರಬಹುದು. ಹೀಗೇನಾದರೂ ಆದರೆ ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ನಿಗದಿಯಾದ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಗಳು ಇವೆ.

Advertisement

ನವ ಬಿಜೆಪಿ ಹಳೆ ಕಾಂಗ್ರೆಸ್‌!
ಒಂದಂತೂ ನಿಜ, ಬಿಜೆಪಿ ಈಗ ಇಂದಿರಾ ಗಾಂಧಿ ಕಾಲದ ಕಾಂಗ್ರೆಸ್‌ನಂತಾಗಿದೆ. ಕೈಯಲ್ಲಿ ದೊಣ್ಣೆ ಹಿಡಿದು ಆಡಳಿತ ನಡೆಸುವ ಪರಿ ಇದು. ಪಕ್ಷವನ್ನು ಅಧಿಕಾರಕ್ಕೆ ತರಲು ಏನು ಬೇಕೋ ಅದನ್ನು ಮಾಡುವ ಸ್ಥಿತಿಯಲ್ಲಿ ವರಿಷ್ಠರು ಇದ್ದಾರೆ. ‘ನೀವು ಮಾಡದಿದ್ದರೆ ನಮಗೆ ಮಾಡಲು ಗೊತ್ತಿದೆ’ ಎಂದು ಅಮಿತ್‌ ಶಾ ಆಗಾಗ ಹೇಳುವುದನ್ನು ಕಂಡಾಗ “ಏನೂ ಆಗಬಹುದು’ ಎಂದೆನಿಸುತ್ತದೆ. ಗೆಲುವು ಪಡೆಯುವ ಸಾಧ್ಯತೆಯನ್ನೇ ಮಾನದಂಡವಾಗಿಸಿ ಶಾ ತಂಡ ದೇಶಾದ್ಯಂತ ಕಾರ್ಯಾಚರಿಸುತ್ತಿರುವಾಗ ಕರ್ನಾಟಕವನ್ನು ಬಿಡುವರೇ?

Advertisement

Udayavani is now on Telegram. Click here to join our channel and stay updated with the latest news.

Next