ಕಲಬುರಗಿ: 2014ರಲ್ಲಿ ಕೇವಲ 55ಲಕ್ಷ ಕೋಟಿ ರೂ.ಗಳಷ್ಟಿದ್ದ ಸಾಲ 155 ಲಕ್ಷ ಕೋಟಿ ರೂ. ಹೇಗಾಯಿತು? ಎನ್ನುವುದಕ್ಕೆ ಪ್ರಧಾನಿ ಮೋದಿ ಸೇರಿ ಕಳೆದ ಎಂಟು ವರ್ಷಗಳಲ್ಲಿ ಭಾರೀ ವಿಕಾಸವಾಗಿದೆ ಎಂದು ಹೇಳಿಕೊಳ್ಳುವವರು ಉತ್ತರಿಸಬೇಕಿದೆ. ಸಾಲವೇ ದೊಡ್ಡ ಸಾಧನೆ ಎನ್ನುವುದು ಬೇರೆ ಹೇಳಬೇಕಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸರ್ ಎಂ.ವಿಶ್ವೇಶ್ವರಯ್ಯ ಸಹಕಾರಿ ಬ್ಯಾಂಕ್ ನಿಯಮಿತದ 25ನೇ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಜನತೆಗೆ ಎಂಟು ಚೀತಾಗಳನ್ನು ತಂದಿರುವುದು ದೊಡ್ಡ ಸುದ್ದಿಯಾಗಿದೆ. ಮಾಧ್ಯಮಗಳಲ್ಲೂ ಇದು ದೊಡ್ಡ ಮಟ್ಟದಲ್ಲಿ ಪ್ರಚಾರವೂ ಆಗಿದೆ. ವಾಸ್ತವದಲ್ಲಿ ಎಂಟು ವರ್ಷಗಳಲ್ಲಿ 155ಲಕ್ಷ ಕೋಟಿ ರೂ.ಗಳಷ್ಟು ಸಾಲ ಏಕೆ ಆಯಿತು? ಅದನ್ನು ಯಾವ ರೀತಿ ಮಾಡಿದರು? ಯಾರಿಗಾಗಿ ಮಾಡಿದರು? ಎಂಬ ಪ್ರಶ್ನೆಗಳನ್ನು ಜನರು ಕೇಳದೆ ಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯ ಖಂಡಿತ ಎದುರಾಗಲಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಬೆಲೆ ಏರಿಕೆ ವಿಪರೀತವಾಗಿದೆ. ನಿರುದ್ಯೋಗ ಉಲ್ಬಣಿಸುತ್ತಿದೆ. ರೈತರು ವಿಮೆ ಮಾಡಿಸಿದ ಹಣ ಉಳ್ಳವರ ವಿಮಾ ಕಂಪನಿ ಪಾಲಾಗುತ್ತಿದೆ. ಜಿಡಿಪಿ ಕುಸಿದಿದೆ. ಶಿಕ್ಷಣ ಹಳ್ಳ ಹಿಡಿಸುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ.
ಖಾಸಗಿ ವಲಯದಲ್ಲೂ ಉದ್ಯೋಗ ಕಡಿತಗೊಳ್ಳುತ್ತಿವೆ. ಇಷ್ಟೆಲ್ಲ ಇದ್ದಾಗ ಜನರ ನೆರವಿಗೆ ಯೋಜನೆ ರೂಪಿಸದ ಸರಕಾರ, ದೇಶದ ದೊಡ್ಡ ಶ್ರೀಮಂತರ 9.91ಲಕ್ಷ ಕೋಟಿ ರೂ. ಮನ್ನಾ ಮಾಡುತ್ತಿದೆ. ಇವರು ದಿವಾಳಿಯಾಗಿದ್ದಾರಂತೆ, ಉಳಿದವರು ಚೆನ್ನಾಗಿದ್ದಾರಂತೆ..ಇದು ಕೇಂದ್ರ ಸರಕಾರದ ನಿಲುವು. ಇದನ್ನು ಪ್ರಶ್ನೆ ಮಾಡದ ಹೊರತು ಅಭಿವೃದ್ಧಿ, ಜನರಿಗೆ ನೆಮ್ಮದಿ ಸಿಗುವುದು ಕಷ್ಟ ಎಂದರು.