ಶಿಲ್ಲಾಂಗ್:ಭಾರೀ ಪ್ರಮಾಣದ ಸ್ಫೋಟಕಗಳು ಮತ್ತು ಡಿಟೋನೇಟರ್ಸ್ ಅನ್ನು ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಮೇಘಾಲಯ ಪೊಲೀಸರು ಪತ್ತೆಹಚ್ಚಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಶುಕ್ರವಾರ(ಡಿಸೆಂಬರ್ 04, 2020) ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ ಪ್ರಮಾಣದ ಸ್ಫೋಟಕಗಳು ಸಾಗಾಟವಾಗುವ ಸಾಧ್ಯತೆ ಇದೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಬುಧವಾರ ರಾತ್ರಿ ಚಾರ್(4) ಕಿಲೊ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದರು ಎಂದು ವರದಿ ವಿವರಿಸಿದೆ.
ಲಾಡ್ರಿಂಬಾಯ್ ಪೊಲೀಸ್ ಔಟ್ ಪೋಸ್ಟ್ ಪ್ರದೇಶದಲ್ಲಿ ಅಸ್ಸಾಂ ನೋಂದಣಿಯ ಎಸ್ ಯುವಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿತ್ತು. ಕಾರಿನೊಳಗೆ ಹತ್ತು ಬಾಕ್ಸ್ ಗಳಲ್ಲಿ 250 ಕೆಜಿ ಸ್ಫೋಟಕ(2,000 ಜಿಲೆಟಿನ್ ಕಡ್ಡಿಗಳು), ಒಂದು ಸಾವಿರ ಜೀವಂತ ಡಿಟೋನೇಟರ್ಸ್ ಗಳು ಹಾಗೂ ಎಂಟು ಬಂಡಲ್ ಫ್ಯೂಸ್ ಪತ್ತೆಯಾಗಿತ್ತು ಎಂದು ಅಸಿಸ್ಟೆಂಟ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಜಿಕೆ ಇಂಗ್ರೈ ತಿಳಿಸಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಈ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಬಂಧಿತರು ವಿಚಾರಣೆ ವೇಳೆ ನೀಡಿರುವ ಮಾಹಿತಿ ಮೇರೆಗೆ 5(ಪಾಂಚ್)ಕಿಲೋ ಪ್ರದೇಶದ ಖ್ಲೇರಿಯತ್ ನಲ್ಲಿ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿ ಅಡಗಿಕೊಂಡಿದ್ದ ನಾಲ್ವರನ್ನು ಬಂಧಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ
ನಾಲ್ವರು ಅಡಗಿಕೊಂಡಿದ್ದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಸುಮಾರು 51 ಬಾಕ್ಸ್ ಗಳಲ್ಲಿ 1,275 ಕೆಜಿ ಸ್ಫೋಟಕ(10, 200 ಜಿಲೆಟಿನ್ ಕಡ್ಡಿಗಳು), 5 ಸಾವಿರ ಡಿಟೋನೇಟರ್ಸ್ಸ್ ಹಾಗೂ ಎಂಟು ಬಂಡಲ್ ಫ್ಯೂಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಒಟ್ಟು 1,525 ಕೆಜಿಯಷ್ಟು ಸ್ಫೋಟಕ, 6,000 ಡಿಟೋನೇಟರ್ಸ್ಸ್ ಗಳನ್ನು ಭರ್ಜರಿ ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡಿದ್ದು, ಇದರಿಂದ ಮಹತ್ವದ ಅಪಾಯ ತಪ್ಪಿಸಿದಂತಾಗಿದೆ. ಬಂಧಿತರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಇತರ ಕಾಯ್ದೆ ಅಡಿ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.