ಮಾಲೂರು: ರಾಜಕಾರಣ ಕೇವಲ ಚುನಾವಣೆಗೆ ಸೀಮಿತಗೊಳಿಸಿ, ತಾಲೂಕು ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ರಾಷ್ಟ್ರಿಯ ಹಬ್ಬಗಳ ಅಚರಣಾ ಸಮಿತಿ ಅಯೋಜಿಸಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಬೆಂಗಳೂರಿಗೆ ಹೊಂದಿಕೊಂಡಿದ್ದರೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ತಮ್ಮ ಗುರಿಯಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಮಾರ್ಕಂಡಯ್ಯ ಜಲಾಶಯ ದಿಂದ ತಾಲೂಕಿನ ಕೆಲವು ಹಳ್ಳಿಗಳಿಗೆ ನೀರು ಹರಿಸಲಾಗುತ್ತಿದೆ. ಪ್ರಯೋಗಿಕ ಕಾರ್ಯ ಪ್ರಗತಿಯ ಲ್ಲಿದ್ದು, ಶೀಘ್ರ 152 ಹಳ್ಳಿಗಳಿಗೆ ಕುಡಿಯುವ ನೀರು ನೀಡುವುದಾಗಿ ಭರವಸೆ ನೀಡಿದರು.
ಅಡ್ಡಗಾಲು: ಅದೇ ರೀತಿಯಲ್ಲಿ ಎತ್ತಿನಹೊಳೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಮೇಕೆದಾಟು ಯೋಜನೆಯ ಡಿಪಿಆರ್‌ನಲ್ಲಿ ಜಿಲ್ಲೆಯನ್ನು ಸೇರಿಸಲು ಚಿಂತನೆ ನಡೆದಿದೆ. ಯರಗೋಳು ಯೋಜನೆಯು ಪ್ರಗತಿಯಲ್ಲಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲು ಕೆ.ಸಿ.ವ್ಯಾಲಿ ಯೋಜನೆ ಅರಂಭಿಸಲಾಗಿತ್ತು. ಕೆಲವರು ಯೋಜನೆಯನ್ನು ರಾಜಕೀಯಕ್ಕೆ ಬಳಸಿ ಕೊಂಡು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದರು.
ಅನುದಾನ ನಿರೀಕ್ಷೆ: ತಾಲೂಕಿನಲ್ಲಿ ತೀರ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ 180 ಕೋಟಿ ರೂ. ಅರ್ಥಿಕ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ಅನುಮೋದನೆ ನೀಡಿ, ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳು ಕೈಜೋಡಿಸಲಿ: ಶಾಸಕನಾಗಿ ಸರ್ಕಾರದ ಹಂತದಲ್ಲಿ ಹೋರಾಟ ಮಾಡಿ ಅನುದಾನ ತರಬೇಕಿದೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಪುರಸಭೆಗಳು ರಾಜಕೀಯವನ್ನು ಬಿಟ್ಟು ಅಭಿವೃದ್ಧಿಗೆ ಕೈ ಜೋಡಿಸಿದಲ್ಲಿ ತಾಲೂಕನ್ನು ಮಾದರಿ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಾಲೂರು ಪುರಸಭೆ ಉತ್ತಮವಾಗಿ ಬಳಕೆ ಮಾಡಿಕೊಂಡಿದ್ದು, ಅನುದಾನ ಪಡೆಯುವಲ್ಲಿ ಸಪಲತೆ ಕಾಣುತ್ತಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಶಾಲಾ ವಿದ್ಯಾರ್ಥಿಗಳು ಮತ್ತು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ತಹಶೀಲ್ದಾರ್ ವಿ.ನಾಗರಾಜು ಮಾತನಾಡಿ, ತ್ಯಾಗ ಮತ್ತು ಬಲಿದಾನಗಳಿಂದ ಸಿಕ್ಕಿರುವ ಸ್ವಾತಂತ್ರ್ಯ ಮತ್ತು ಸಂವಿಧಾನದ ಅಶಯ ಕಾಪಾಡುವ ಹೊಣೆ ದೇಶದ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.
ತಾಪಂ ಅಧ್ಯಕ್ಷೆ ತ್ರಿವರ್ಣ ರವಿ, ಉಪಾಧ್ಯಕ್ಷೆ ನಾಗವೇಣಿ, ಪುರಸಭಾಧ್ಯಕ್ಷ ಸಿ.ಪಿ.ನಾಗರಾಜು, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸಿ.ಲಕ್ಷ್ಮಿನಾರಾಯಣ್, ಪಚ್ಚಪ್ಪ, ಹನುಮಂತರೆಡ್ಡಿ ಗೀತಾ, ಭಾರತಮ್ಮ, ಶ್ರೀವಳ್ಳಿ, ತಾಪಂ ಇಒ ಅನಂದ್, ಬಿಇಒ ಮಾಧವರೆಡ್ಡಿ, ಎಇಇ ಪುಟ್ಟರಾಜು, ಸಿಪಿಐ ಸತೀಶ್, ಪಿಎಸ್‌ಐ ಮುರಳಿ, ಪ್ರಾಂಶುಪಾಲರಾದ ನಾರಾಯಣಪ್ಪ, ರವಿಕುಮಾರ್ ಇದ್ದರು.