Advertisement

152 ಕಡೆ ಬಯಲು ಮೂತ್ರ ವಿಸರ್ಜನೆ

12:33 AM Oct 21, 2019 | Lakshmi GovindaRaju |

ಬೆಂಗಳೂರು: ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಸ್ಥಾನ ಗಳಿಸುವ ಉದ್ದೇಶದಿಂದ ಬಿಬಿಎಂಪಿಯು ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

Advertisement

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಕಳೆದ ಬಾರಿ ಉತ್ತಮ ಸ್ಥಾನ ಕಳೆದುಕೊಳ್ಳಲು ಕಾರಣವಾಗಿದ್ದ ಹಲವು ವಿಭಾಗಗಳಲ್ಲಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದರ ಭಾಗವಾಗಿ ಎಲ್ಲೆಲ್ಲಿ ಬಯಲು ಪ್ರದೇಶಗಳಲ್ಲಿ ಸಾರ್ವಜನಿಕರು ಮೂತ್ರವಿರ್ಸಜನೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಸರ್ವೇ ಪ್ರಾರಂಭಿಸಿದ್ದು, ಅಂತಹ 152 ಸ್ಥಳಗಳನ್ನು ಗುರುತಿಸಲಾಗಿದೆ.

ಪ್ರಮುಖವಾಗಿ ಶಿವಾಜಿನಗರ, ಕುಮಾರಸ್ವಾಮಿ ಬಡಾವಣೆ, ಮಹದೇವಪುರ, ದಕ್ಷಿಣ ವಲಯ ಹಾಗೂ ಯಲಹಂಕ ಸೇರಿದಂತೆ ನಗರದ ಹೊರ ವಲಯಗಳಲ್ಲಿ ಹೆಚ್ಚು ಬಯಲು ಪ್ರದೇಶದಲ್ಲಿ ಮೂತ್ರ ವಿರ್ಸಜನೆ ಮಾಡುವುದು ಪತ್ತೆಯಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಕ್ರಮಗಳು: ಕಳೆದ ಬಾರಿ ಹಲವು ಮುಂಜಾಗ್ರತಾ ಕ್ರಮಗಳ ನಡುವೆಯೂ ನಾಗರಿಕರ ನಿರಾಸಕ್ತಿ ಹಾಗೂ ಬಯಲು ಬಹಿರ್ದೆಸೆ ಮುಕ್ತವಾಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ 194ನೇ ರ್‍ಯಾಂಕ್‌ಗೆ ತೃಪ್ತಿ ಪಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮಾರ್ಷ್‌ಗಳ ನೇಮಕ, ಬಹಿರ್ದೆಸೆ ಪ್ರದೇಶ ಗುರುತಿಸುವುದು ಹಾಗೂ ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವುದಕ್ಕೆ ಮುಂದಾಗಿದೆ.

ದಾಖಲೆಯ ಪ್ರಮಾಣದ ದಂಡ: ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವ ಉದ್ದೇಶದಿಂದ ಪಾಲಿಕೆಯು 232 (ನಿವೃತ್ತ ಸೈನಿಕರು) ಮಾರ್ಷಲ್‌ಗ‌ಳನ್ನು ನೇಮಿಸಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರು, ಮೂತ್ರವಿರ್ಸಜನೆ ಮಾಡುವವರು, ಬ್ಲಾಕ್‌ಸ್ಪಾಟ್‌ ನಿರ್ಮಾಣ ಮಾಡುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡುವವರಿಂದ ಸೆಪ್ಟೆಂಬರ್‌ನಲ್ಲಿ 14.33 ಲಕ್ಷ ರೂ. ಹಾಗೂ ಅಕ್ಟೋಬರ್‌ನಲ್ಲಿ (19ರ ವರೆಗೆ) 7,75,030 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಈ ಕ್ರಮದಿಂದಲೂ ಈ ಬಾರಿಯ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಅಂಕಗಳಿಸುವ ವಿಶ್ವಾಸದಲ್ಲಿ ಬಿಬಿಎಂಪಿ ಇದೆ.

Advertisement

ಮಾರ್ಷಲ್‌ಗ‌ಳಿಗೆ ಪ್ರಹರಿ ಬೆಂಬಲ: ಮಾರ್ಷಲ್‌ಗ‌ಳ ಮೇಲೆ ಆಗುತ್ತಿರುವ ಹಲ್ಲೆಯನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿಯು ಮಾರ್ಷಲ್‌ಗ‌ಳಿಗೆ ಎರಡು ಪ್ರಹರಿ ವಾಹನದ ವ್ಯವಸ್ಥೆ ಮಾಡಿದೆ. ಈ ಹಿಂದೆ ರಾತ್ರಿ ಪಾಳಿಯಲ್ಲಿ ಒಬ್ಬರೇ ಮಾರ್ಷಲ್‌ಗ‌ಳು ಗಸ್ತು ತಿರುಗುತ್ತಿದ್ದರು. ಈಗ ಮೂರರಿಂದ ನಾಲ್ಕು ಜನ ಗಸ್ತು ತಿರುಗುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪ್ರಹರಿ ವಾಹನವನ್ನು ಆಯಾ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಕರ್ನಲ್‌ ರಾಜ್‌ ಬೀರ್‌ ಸಿಂಗ್‌, ಚೀಫ್ ಮಾರ್ಷಲ್‌ ತಿಳಿಸಿದರು.

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ ರ್‍ಯಾಂಕಿಂಗ್‌ ಬರಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ.

-ಸರ್ಫರಾಜ್‌ ಖಾನ್‌, ಘನತ್ಯಾಜ್ಯ ಜಂಟಿ ಆಯುಕ್ತ

ಸೆಪ್ಟೆಂಬರ್‌ನಲ್ಲಿ ಸಂಗ್ರಹವಾದ ದಂಡ
ಕಸ ಎಸೆದ ಪ್ರಕರಣ ಸಂಖ್ಯೆ: 1,092
ದಂಡ: 4,47,325 ರೂ.
ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಪ್ರಕರಣ: 1,449
ದಂಡ: 7,02,250 ರೂ.
ಮೂತ್ರ ವಿಸರ್ಜನೆ ಪ್ರಕರಣ: 295
ದಂಡ: 1,05,480 ರೂ.
ಒಟ್ಟು: 14.33 ಲಕ್ಷ ರೂ.

ಅಕ್ಟೋಬರ್‌ನಲ್ಲಿ (ಅ.19ರವರೆಗೆ) ಸಂಗ್ರಹಿಸಿರುವ ದಂಡ
ಸೆಪ್ಟೆಂಬರ್‌ನಲ್ಲಿ ಸಂಗ್ರಹವಾದ ದಂಡ
ಕಸ ಎಸೆದ ಪ್ರಕರಣ ಸಂಖ್ಯೆ: 1054
ದಂಡ: 3,96,780
ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಪ್ರಕರಣ: 454
ದಂಡ: 3,60,500
ಮೂತ್ರ ವಿಸರ್ಜನೆ ಪ್ರಕರಣ: 54
ದಂಡ: 17,750
ಒಟ್ಟು: 7,75,030

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next