Advertisement

ಸುಂದರ ಭವಿಷ್ಯಕ್ಕಾಗಿ ಸ್ಪಷ್ಟ ಗುರಿ ಅಗತ್ಯ: ಮೊಯಿಲಿ

12:27 PM Sep 21, 2018 | |

ಮಹಾನಗರ: ಯುವಜನತೆ ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ವಿದ್ಯಾರ್ಥಿಗಳು ಸುಂದರ ಭವಿಷ್ಯವನ್ನು ನಿರ್ಮಾಣ ಮಾಡಲು ಕಲಿಕಾ ಹಂತದಲ್ಲಿಯೇ ಸ್ಪಷ್ಟ ಗುರಿ ಹೊಂದಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ತಿಳಿಸಿದರು.

Advertisement

ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ 150ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ ವಿ.ವಿ. ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಕೆಲ ವರ್ಷಗಳ ಹಿಂದೆ ಕಾಲೇಜಿನಲ್ಲಿ ಮೂಲ ಸೌಕರ್ಯ ವ್ಯವಸ್ಥೆಯ ಕೊರತೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಲೇಜು ಬೆಳವಣಿಗೆ ಕಾಣುತ್ತಿದೆ. ಸಂಸ್ಥೆಯಲ್ಲಿರುವ 32 ಮಂದಿ ಬೋಧಕರು ಪಿಎಚ್‌.ಡಿ.ಪದವೀಧರರಾಗಿದ್ದು, ವರ್ಷದಿಂದ ವರ್ಷಕ್ಕೆ ಶಿಕ್ಷಣದ ಗುಣಮಟ್ಟ ಕೂಡ ಹೆಚ್ಚುತ್ತಿದೆ ಎಂದು ತಿಳಿಸಿದರು.

ಓದುವ ಹವ್ಯಾಸ ಕಡಿಮೆ
ಮಂಗಳೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ| ಎಂ.ಐ. ಸವದತ್ತಿ ಮಾತನಾಡಿ, ಶಿಕ್ಷಕ ವೃತ್ತಿ ನಿರಂತರ ಕಲಿಯುವ ಉದ್ಯೋಗವಾಗಿದ್ದು, ಇತ್ತೀಚೆಗೆ ಕೆಲವು ಶಿಕ್ಷಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಕೇವಲ ಪದವಿ ಗಳಿಸುವ ಏಕಮಾತ್ರ ಉದ್ದೇಶಗಳಿಂದ ಕಾಲೇಜುಗಳಿಗೆ ತೆರಳುತ್ತಿದ್ದಾರೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ| ಎ.ಎಂ. ಖಾನ್‌ ಪ್ರಾಸ್ತಾವಿಕ ಮಾತನಾಡಿ, ವಿಶ್ವವಿದ್ಯಾನಿಲಯ ಕಾಲೇಜು 150 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿ.ವಿ. ಕಾಲೇಜು ಕ್ಯಾಂಪಸ್‌ಗೆ ಸಿಸಿ ಕೆಮರಾ ಅಳವಡಿಸಲಾಗುವುದು. ಕಾಲೇಜು ಕ್ಯಾಂಪಸ್‌ ಒಳಗೆ ವೈಫೈ ಝೋನ್‌ ಆಗಿ ಪರಿವರ್ತನೆ ಮಾಡುತ್ತೇವೆ. ಸಸ್ಯಶಾಸ್ತ್ರ ವಿಭಾಗದಿಂದ ಉದ್ಯಾನ ನಿರ್ಮಾಣ ಮಾಡಲಿದ್ದು, 150 ವಿವಿಧ ತಳಿಯ ಸಸ್ಯಗಳನ್ನು ನೆಡಲಾಗುತ್ತದೆ ಎಂದರು.

ಸಮ್ಮಾನ
ಸಮಾರಂಭದಲ್ಲಿ ಪ್ರೊ| ಎಂ.ಐ. ಸವದತ್ತಿ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ವಿ.ವಿ. ಕಾಲೇಜು ಮಂಗಳೂರಿನ ಪ್ರಾಂಶುಪಾಲ ಡಾ| ಉದಯಕುಮಾರ್‌ ಎಂ.ಎ., ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ., ಮೇಯರ್‌ ಭಾಸ್ಕರ್‌ ಕೆ., ಮಂಗಳೂರು ವಿ.ವಿ. ಕುಲಪತಿ (ಪ್ರಭಾರ) ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ., ಪಾಲಿಕೆ ಮುಖ್ಯಸಚೇತಕ ಶಶಿಧರ ಹೆಗ್ಡೆ, ಜೆಡಿಎಸ್‌ ಯುವಾಧ್ಯಕ್ಷ ಅಕ್ಷಿತ್‌ ಸುವರ್ಣ, ಕಾರ್ಪೊರೇಟರ್‌ ವಿನಯರಾಜ್‌ ಮೊದಲಾದವರು ಉಪಸ್ಥಿತರಿದ್ದರು. 

ಸಂಶೋಧನೆಯಲ್ಲಿ ತೊಡಗಿ
ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಅಗತ್ಯವಿದೆ. ವಿದ್ಯಾರ್ಥಿಗಳು ಪದವಿ ಕಲಿಯುವ ಹಂತದಲ್ಲಿಯೇ ಸಂಶೋಧನೆಯಲ್ಲಿ ತೊಡಗಬೇಕು. ಕಾಲೇಜುಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕಿದೆ. ಶಿಕ್ಷಕರು ಪಠ್ಯದ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಗಳನ್ನು ಕಲಿಸಬೇಕು. ದೇಶದಲ್ಲಿ ಬೇರೊಬ್ಬರನ್ನು ದೂಷಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕಾಲೇಜುಗಳ ಬೆಳವಣಿಗೆಯ ದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಹಾಯ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ನಾಯಕತ್ವ ಗುಣ ಕಡಿಮೆಯಾಗಿದೆ ಎಂದು ಪ್ರೊ| ಎಂ.ಐ. ಸವದತ್ತಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next