ಬೆಳಗಾವಿ: ಕೋವಿಡ್ 19 ಭೀತಿ ಹೊಡೆತದಿಂದ ತತ್ತರಿಸಿರುವ ಸಮಾಜಕ್ಕೆ ಕೈದಿಗಳು ಕೈಜೋಡಿಸಿದ್ದು, ನಿತ್ಯ 1500ಕ್ಕೂ ಹೆಚ್ಚು ಮಾಸ್ಕ್ಗಳನ್ನು ತಯಾರಿಸುವ ಮೂಲಕ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳು ಕೋವಿಡ್ 19 ವಿರುದ್ಧ ಹೋರಾಡಲು ನಿತ್ಯ 15 ಗಂಟೆ ಕಾಲ ಸೇವೆ ಸಲ್ಲಿಸುತ್ತಿದ್ದಾರೆ.
ಹಿಂಡಲಗಾ ಜೈಲಿನಲ್ಲಿ ಈ ಹಿಂದೆ ದಿನಾಲು ಬಟ್ಟೆಯ 250ರಿಂದ 300 ಮಾಸ್ಕ್ಗಳು ತಯಾರಾಗುತ್ತಿದ್ದವು. ಈಗ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹಾಗೂ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ದಿನಾಲು 1500 ಮಾಸ್ಕ್ಗಳು ತಯಾರಾಗುತ್ತಿದ್ದು, ಇನ್ನೆರಡು ದಿನಗಳ ನಂತರ ಪ್ರಮಾಣ 2000ಕ್ಕೆ ಏರಲಿದೆ. ಜೈಲಿನಲ್ಲಿರುವ 25 ಪುರುಷರು ಹಾಗೂ 5 ಜನ ಮಹಿಳಾ ಜೈಲು ನಿವಾಸಿಗಳು ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ದುಡಿಯುತ್ತಿದ್ದಾರೆ.
ಪೊಲೀಸ್ ಇಲಾಖೆ, ಬಿಎಸ್‌ಎನ್‌ಎಲ್, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಬೇಡಿಕೆ ಬರುತ್ತಿದೆ. ಕೆಎಸ್‌ಆರ್‌ಪಿ, ಕಂಟ್ರೋಲ್ ರೂಂ, ಟ್ರಾಫಿಕ್ ಪೊಲೀಸರಿಗೆ ಮಾಸ್ಕ್ ಗಳನ್ನು ನೀಡಲಾಗಿದೆ. ಜತೆಗೆ ಪ್ರತಿ ಪೊಲೀಸ್ ಠಾಣೆಗೆ 150 ಬಟ್ಟೆಯ ಮಾಸ್ಕ್ಗಳನ್ನು ನೀಡಲಾಗಿದೆ. ಬೇರೆ ಬೇರೆ ಕಡೆಯಿಂದ ಬೇಡಿಕೆ ಬರುತ್ತಿದೆ. ಮೊದಲು ಸರ್ಕಾರಿ ಇಲಾಖೆಯವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹಿಂಡಲಗಾ ಕಾರಾಗೃಹದ ಜೈಲರ್ ಲೋಕೇಶಕುಮಾರ್ ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆಯವರು ಒಟ್ಟು 50 ಸಾವಿರ ಮಾಸ್ಕ್ ಕೇಳಿದ್ದಾರೆ. ರೆಡ್‌ಕ್ರಾಸ್‌ಗೆ ಈಗ ದಿನಾಲು 500 ಮಾಸ್ಕ್ ಗಳನ್ನು ಕೊಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಂತರದಲ್ಲಿ ಇದರ ಪ್ರಮಾಣ ಹೆಚ್ಚಿಸಲಾಗುವುದು. ಪ್ರತಿ ಮಾಸ್ಕ್ ದರ 6 ರೂ. ಇದ್ದು, ಕಚ್ಚಾ ವಸ್ತುವಿನ ವೆಚ್ಚವೇ 5 ರೂ. ಆಗುತ್ತದೆ. ಇನ್ನುಳಿದಂತೆ 50 ಪೈಸೆ ಖರ್ಚಾಗುತ್ತಿದೆ. ಶೇ. 15ರಷ್ಟು ಲಾಭ ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಬೇಡಿಕೆ ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಹೆಚ್ಚಿನ ದರ ವಸೂಲಿ ಮಾಡುತ್ತಿಲ್ಲ. ಒಂದೇ ದರವನ್ನೇ ಆಕರಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ನಮ್ಮ ಹಿಂಡಲಗಾ ಜೈಲಿನಿಂದಲೂ ಸೇವೆ ಸಲ್ಲಿಸುವ ಉದ್ದೇಶದಿಂದ ನಿತ್ಯ 1500ಕ್ಕೂ ಹೆಚ್ಚು ಬಟ್ಟೆಯ ಮಾಸ್ಕ್ ತಯಾರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದೆ. ಮೊದಲು ಸರ್ಕಾರಿ ಇಲಾಖೆಯವರಿಗೆ ಆದ್ಯತೆ ನೀಡಿ ವಿತರಿಸಲಾಗುತ್ತಿದೆ
. – ಕೃಷ್ಣಕುಮಾರ, ಮುಖ್ಯ ಅಧೀಕ್ಷಕರು, ಹಿಂಡಲಗಾ ಕಾರಾಗೃಹ
ಕೋವಿಡ್ 19 ಸೋಂಕು ನಿಯಂತ್ರಣಕ್ಕೆ 10 ದಿನಗಳ ಅವ ಧಿಯಲ್ಲಿ 8 ಸಾವಿರ ಬಟ್ಟೆಯ ಮಾಸ್ಕ್ ಗಳನ್ನು ಹಿಂಡಲಗಾ ಕಾರಾಗೃಹದಲ್ಲಿ ತಯಾರಿಸಲಾಗಿದೆ. ಒಬ್ಬ ವ್ಯಕ್ತಿ 200ಕ್ಕಿಂತ ಹೆಚ್ಚು ಮಾಸ್ಕ್ ತಯಾರಿಸಿದರೆ ಒಂದು ಮಾಸ್ಕ್ಗೆ 2 ರೂ. ಹೆಚ್ಚಿಗೆ ನೀಡುವುದಾಗಿ ಹೇಳಲಾಗಿದೆ. ಮಾಸ್ಕ್ ಹೊಲೆಯುವ ಸ್ಥಳದಲ್ಲಿಯೇ ಉಪಹಾರ, ಊಟ, ಬಿಸ್ಕೀಟ್, ಚಹಾ ನಿಡಲಾಗುತ್ತಿದೆ.
-ಲೋಕೇಶಕುಮಾರ, ಜೈಲರ್, ಹಿಂಡಲಗಾ ಕಾರಾಗೃಹ
-ಭೈರೋಬಾ ಕಾಂಬಳೆ