ಮಂಡ್ಯ: ಲೋಕಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕಾಮಗಾರಿಗಳು ಹಂತ ಹಂತವಾಗಿ ಚಾಲನೆಗೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಜಿ.ಮಲ್ಲಿಗೆರೆ ಗ್ರಾಪಂ ವ್ಯಾಪ್ತಿಯ ಚಿಕ್ಕಗಂಗ ವಾಡಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಡಾಂಬರು ರಸ್ತೆ ಕಾಮಗಾರಿ, ಮಂಡ್ಯ- ಹಡಗಲಿ, ಹೊನ್ನೇ ಮಡು- ಹುನುಗನಹಳ್ಳಿ ನಾಗಮಂಗಲ ಮಾರ್ಗದಲ್ಲಿ ಲೋಕಪಾವನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಚಾಲನೆ ನೀಡಿದ್ದ ಕಾಮಗಾರಿಗಳ ಪೈಕಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ಇಲಾಖೆಯಿಂದ 1500 ಕೋಟಿ ರೂ.ಗಳಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಲೋಕಪಾವನಿ ನದಿಗೆ ಸೇತುವೆ: ಜಿ.ಮಲ್ಲಿಗೆರೆ ಗ್ರಾಮದಿಂದ ಚಿಕ್ಕಗಂಗವಾಡಿ, ಹೊನ್ನೇಮಡು ಮೂಲಕ ತೆರಳುವ ರಸ್ತೆಯಲ್ಲಿ 5 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದು, ಲೋಕಪಾವನಿ ನದಿಗೆ ಅಡ್ಡಲಾಗಿ 15 ಅಡಿ ಎತ್ತರದಲ್ಲಿ ಸೇತುವೆ ನಿರ್ಮಿಸಿ, ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಲಾಗುವುದು. ಸೇತುವೆ ನಿರ್ಮಾಣ ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಸಂದರ್ಭದಿಂದಲೂ ಈ ಭಾಗದ ಜನರ ಬೇಡಿಕೆಯಾಗಿತ್ತು. ಜನರ ಆಶಯದಂತೆ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ: ಜಿ.ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಬ್ಲೂ ್ಯಡಿ ಇಲಾಖೆ ವತಿಯಿಂದ ಚಿಕ್ಕಗಂಗಾವಡಿ- ತಿಪ್ಪಾಪುರ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು 3.5 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ತಿಪ್ಪಾಪುರ ಗ್ರಾಮದಲ್ಲಿ ಹೇಮಾವತಿ ನಾಲೆವರೆಗೆ 80 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಚಿಕ್ಕಗಂಗವಾಡಿ ಗ್ರಾಮದ ಎರಡು ದೇವಾಲಯ ಸುತ್ತ ಕಾಂಕ್ರಿಟ್ ಹಾಕುವ ಕಾಮಗಾರಿಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಜಿ.ಮಲ್ಲಿಗೆರೆಯಿಂದ ಹುನುಗನಹಳ್ಳಿ ಗೇಟ್ ಸೇರುವ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಮರಳೆಕೆರೆ ಗ್ರಾಮಸ್ಥರು ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದು, ಅದರಂತೆ ಸರ್ಕಾರ 99 ಲಕ್ಷ ರೂ. ಮಂಜೂರು ಮಾಡಿದೆ. ಶೀಘ್ರದಲ್ಲಿ ಟೆಂಡರ್ ಕಡೆಯಲಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಚಿವ ಪುಟ್ಟರಾಜು ಭರವಸೆ ವ್ಯಕ್ತಪಡಿಸಿದರು.
ಸಮುದಾಯ ಭವನ: ಜಿ.ಮಲ್ಲಿಗೆರೆ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇನ್ನುಳಿದ ಅನುದಾನವನ್ನು ಬಿಡುಗಡೆ ಮಾಡಿಕೊಡುವುದಾಗಿ ತಿಳಿಸಿದ ಅವರು ಎಸ್‌ಇಪಿ ಯೋಜನೆಯಡಿ 25 ಲಕ್ಷ ರೂ. ಬಿಡುಗಡೆಯಾಗಿದೆ. ಹೊನ್ನೇ ಮಡು ಗ್ರಾಮಕ್ಕೆ 25 ಲಕ್ಷ ರೂ., ಅನಕುಪ್ಪೆ ಗ್ರಾಮದ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ಅರಕನಕೆರೆ ರಸ್ತೆ ಅಭಿ ವೃದ್ಧಿಗೆ 1 ಕೋಟಿ ರೂ. ಸೇರಿದಂತೆ ಜಿ.ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರು, ತಾಪಂ ಸದಸ್ಯ ಬೀರಪ್ಪ, ಮುಖಂಡರಾದ ಜವರೇಗೌಡ, ಜಯರಾಮು, ಮಾದೇಗೌಡ, ಸುರೇಶ್, ಸಿ.ಕುಮಾರ್, ದಾಸೇಗೌಡ, ಸಿ.ಡಿ.ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು.