Advertisement

ವಿದ್ಯಾಸಂಸ್ಥೆಯ ಅಭಿಮಾನ ಒಂದೂವರೆ ಶತಮಾನ

10:01 AM Feb 03, 2020 | mahesh |

ಗವರ್ನಮೆಂಟ್ ಕಾಲೇಜು ಎಂದೇ ಪ್ರಸಿದ್ಧವಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು 150 ವರ್ಷಗಳನ್ನು ದಾಟಿ ಮುನ್ನಡೆಯುತ್ತಿದೆ. ಬರುವ ಫೆ. 6 ರಂದು ಇದರ ಸಂಭ್ರಮಾಚರಣೆ ಇದೆ.

Advertisement

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿಗೆ ಈಗ 150ರ ಸಂಭ್ರಮವನ್ನು ದಾಟಿ ಮುಂದುವರಿದಿದೆ. ನಾನು ಇವತ್ತು ಇಷ್ಟು ಎತ್ತರಕ್ಕೇರಬೇಕಾದರೆ ಅಲ್ಲಿ ಪಡೆದ ಶಿಕ್ಷಣವೇ ಕಾರಣ ಎಂದು ವಿನಯಪೂರ್ವಕವಾಗಿ ಹೇಳಬಯಸುತ್ತೇನೆ. ಅಲ್ಲಿನ ರವೀಂದ್ರ ಕಲಾಭವನವೆಂದರೆ ನನಗೆ ತುಂಬ ಪ್ರೀತಿ. 1868ರಲ್ಲಿ ಆರಂಭಗೊಂಡು, 1868ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ ಈ ವಿದ್ಯಾಸಂಸ್ಥೆಗೆ 1922ರಲ್ಲಿ ವಿಶ್ವಕವಿ ರವೀಂದ್ರನಾಥ ಠಾಕೂರರು ಭೇಟಿ ನೀಡಿದರು. ಅವರ ಭೇಟಿಯ ನೆನಪಿಗಾಗಿ ನಿರ್ಮಿಸಿದ ಅಕಾಡೆಮಿ ಹಾಲ್‌ಗೆ ರವೀಂದ್ರ ಕಲಾಭವನ ಎಂದು ನಾಮಕರಣ ಮಾಡಲಾಯಿತು. ಇದೇ ವೇದಿಕೆಯಲ್ಲಿ ನಾನು ನೂರಾರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಆ ನೆನಪುಗಳಂತೂ ಈಗಲೂ ಹಚ್ಚಹಸಿರು.

1958-61ರ ಅವಧಿಯಲ್ಲಿ ಪದವಿ ಓದುತ್ತಿದ್ದಾಗ ನಾವು ಬಹಳ ತುಂಟ ಹುಡುಗರೆಂದೇ ಗುರುತಿಸಿಕೊಂಡಿದ್ದೆವು. ಕನ್ನಡ ವಿಭಾಗದ ಮುಖ್ಯಸ್ಥರಾಗಿ ಆಗ ಪ್ರೊ. ಎಂ.ಆರ್‌. ಶಾಸ್ತ್ರಿ ಅವರಿದ್ದರು. ನಮ್ಮ ಸಾಹಿತ್ಯ ಚಟುವಟಿಕೆಗಳಿಗೆ ಪ್ರೇರಣೆಯಾಗಿದ್ದರು. ಲೇಖಕ ವಿ.ಎಂ. ಇನಾಮ್‌ದಾರ್‌ ಅವರೂ ನಮ್ಮ ಬರವಣಿಗೆಯನ್ನು ತಿದ್ದಿ ತೀಡುತ್ತಿದ್ದರು. ಒಮ್ಮೆ ಕನ್ನಡ ಭಾಷೆಯ ಬಗ್ಗೆ ನವೋದಯ ಎಂಬ ನಾಟಕ ಬರೆದಿದ್ದೆ. ಅದರ ಪ್ರದರ್ಶನ ಸಂದರ್ಭದಲ್ಲಿ ಪ್ರಸ್ತುತ ಹಿರಿಯ ವಕೀಲರಾಗಿರುವ ಎ.ಎಸ್‌.ಎನ್‌. ಹೆಬ್ಟಾರ್‌ ಅವರಿಗೆ ಕೋಟು ಹಾಕಿ ವಿಶ್ವೇಶ್ವರಯ್ಯರಂತೆ ನಿಲ್ಲಿಸಿದ್ದೆವು. ಎತ್ತರ ನಿಲುವಿನ ಅವರು ಹಾಗೆಯೇ ಕಾಣಿಸುತ್ತಿದ್ದರು!

ಶಾಸ್ತ್ರಿಗಳ ಪ್ರೇರಣೆಯಿಂದ ಇದೇ ರವೀಂದ್ರ ಕಲಾಭವನದಲ್ಲಿ ನಾವು ಯಕ್ಷಗಾನ ತಾಳಮದ್ದಳೆ ನಡೆಸುತ್ತಿದ್ದೆವು. ಹಿರಿಯ ಪತ್ರಕರ್ತರಾಗಿ ಹೆಸರು ಮಾಡಿದ ಸಂತೋಷ್‌ ಕುಮಾರ್‌ ಗುಲ್ವಾಡಿ ಅವರು ಚೆಂಡೆ ನುಡಿಸುತ್ತಿದ್ದರು. ಲೇಖಕರಾಗಿ ಗುರುತಿಸಿಕೊಂಡ ಅ. ಬಾಲಕೃಷ್ಣ ಪೊಳಲಿ ಅವರು ಉತ್ಸುಕರಾಗಿ ಭಾಗವಹಿಸುತ್ತಿದ್ದರು. ವಿಶ್ವವಿದ್ಯಾಲಯ ಕಾಲೇಜು ಸ್ಥಾಪನೆಯಾಗಿ 150 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಈ ಇಬ್ಬರೂ ಸಹಪಾಠಿಗಳು ನನಗೆ ನೆನಪಾಗುತ್ತಾರೆ.

ಅಣಕು ಸಂಸತ್ತು ಆಗ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಅತ್ಯಂತ ಕುತೂಹಲದ ವಿಷಯವಾಗಿತ್ತು. ಇದರಲ್ಲಿ ಭಾಗವಹಿಸಲು ಪೂರಕಜ್ಞಾನ ಸಂಪಾದಿಸಲೆಂದೇ, ನಾವು ದೇಶದ ರಾಜಕೀಯ ಬೆಳವಣಿಗೆಗಳನ್ನು ಬಹಳ ತಿಳಿದುಕೊಳ್ಳಲು ಆಸಕ್ತರಾಗಿದ್ದೆವು. ಅಣಕು ವಿಶ್ವಸಂಸ್ಥೆ ಸಭೆಯೂ ನಡೆಯುತ್ತಿತ್ತು. ಇಂತಹ ಒಂದು ಸಭೆಯಲ್ಲಿ ನಾನು ವಿ. ಕೆ. ಕೃಷ್ಣ ಮೆನನ್‌ ಅವರ ಭಾಷಣವನ್ನು ಅಭಿನಯಿಸುತ್ತ, ಅವರಂತೆಯೇ ಕುಸಿದು ಬಿದ್ದದ್ದೂ ನೆನಪಿದೆ. ಅದಿರಲಿ, ಇದೇ ವೇದಿಕೆಯಲ್ಲಿ ನಾವೊಂದು ಕ್ರಾಂತಿಯನ್ನು ಮಾಡಿದ್ದನ್ನು ಮರೆಯುವುದಾದರೂ ಹೇಗೆ! ಹಿಂದೆಲ್ಲ ನಾಟಕ ಪ್ರದರ್ಶನದ ಸಂದರ್ಭ ಸ್ತ್ರೀಪಾತ್ರಗಳನ್ನೂ ಹುಡುಗರೇ ನಿರ್ವಹಿಸುತ್ತಿದ್ದರು. ಆದರೆ, ನಾವು ಓದುತ್ತಿದ್ದ ವರ್ಷದಲ್ಲಿ “ಸ್ತ್ರೀಪಾತ್ರಗಳನ್ನು ವಿದ್ಯಾರ್ಥಿನಿಯರೇ ನಿರ್ವಹಿಸಿದರೆ ಹೇಗೆ?’ ಎಂಬ ಯೋಚನೆ ಬಂತು. ನಾಟಕವೊಂದರಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದೆವು. ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರೂ ನಾಟಕಗಳಲ್ಲಿ ಪಾತ್ರ ಮಾಡಲು ಧೈರ್ಯ ತೋರಿದರು.

Advertisement

ನಾನು ರಾಜಕೀಯದಲ್ಲಿ ಮುಂದುವರಿದಾಗ, ರವೀಂದ್ರ ಕಲಾಭವನದ ನವೀಕರಣಕ್ಕೆ ಯುಜಿಸಿ ಅನುದಾನ ದೊರೆಯುವಂತೆ ಪ್ರಸ್ತಾವನೆ ಸಲ್ಲಿಸಲು ಒತ್ತಡ ಹಾಕಿದ್ದೆ. ಇದೀಗ ಭವನ ಮತ್ತಷ್ಟು ಸುಂದರವಾಗಿದೆ.

ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡಿಸಿದ್ದು ಮಾತ್ರವಲ್ಲದೆ, ಸಾಹಿತ್ಯದಲ್ಲಿಯೂ ಆಸಕ್ತಿ ಮೂಡುವಂತೆ ಮಾಡಿದ್ದು ಕಾಲೇಜು ಟೈಮ್ಸ್‌ ಎಂಬ ಕಾಲೇಜು ಪತ್ರಿಕೆ. ಪ್ರತೀವಾರವೂ ಈ ಪತ್ರಿಕೆ ಸಿದ್ಧಪಡಿಸುತ್ತಿದ್ದೆವು. ಪ್ರೊ. ಹರಿಣ್‌ ಎಂಬ ಇಂಗ್ಲಿಷ್‌ ಪ್ರಾಧ್ಯಾಪಕರು ಆಗ ಮಾರ್ಗದರ್ಶನ ಮಾಡುತ್ತಿದ್ದರು. ಈಗ ಮುಂಬೈಯಲ್ಲಿರುವ ರಾವ್‌ ಸಾಮಗ ಎಂಬವರು ಸಂಪಾದಕರಾಗಿದ್ದರು. ನನಗೆ ಆಗ ಕವನ ಬರೆಯುವುದೆಂದರೆ ಬಹಳ ಹುಮ್ಮಸ್ಸು. ನನ್ನ ಸಾಹಿತ್ಯಾಭಿರುಚಿಗೂ ಇದೇ ಕಾಲೇಜು ಪ್ರೇರಣೆ ಎಂದು ಬೇರೆ ಹೇಳಬೇಕೆ!

ವಿದೇಶದಿಂದ ವಾಪಸು ಬಂದವರೇ ಈ ಕಾಲೇಜು ಪ್ರಾಂಶುಪಾಲರಾಗುತ್ತಿದ್ದರು. ಪ್ರೊ. ಪಾರ್ವತಿ ಪ್ರಭು, ಪ್ರೊ. ರಾಜು, ಪ್ರೊ. ರಾಮಾಚಾರ್‌ಲು, ಪ್ರೊ. ಸೇತುಮಾಧವನ್‌, ಪ್ರೊ. ಗೋಮತಿ ಪಿ. ಮುಂತಾದವರು ಮಾಡಿದ ಪಾಠಗಳ ನೆನಪು ನನ್ನ ಮನಸ್ಸಿನಿಂದ ಮಾಸಿ ಹೋಗಿಲ್ಲ. ಈ ಕಾಲೇಜಿನ ತರಗತಿಯೊಳಗೂ, ತರಗತಿಯ ಹೊರಗೂ ನಾನು ಕಲಿತ ವಿಚಾರಗಳು ಅನೇಕ. 1993ರಲ್ಲಿ ಈ ಕಾಲೇಜನ್ನು ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜನ್ನಾಗಿ ಮಾಡಲು ಶಿಫಾರಸು ಮಾಡಿದ್ದೆ. ಇಂದು ಕಾಲೇಜಿನಲ್ಲಿ ಶಿಕ್ಷಣ ಗುಣಮಟ್ಟ ಉತ್ತಮವಾಗಿದೆ.

ಎಂ. ವೀರಪ್ಪ ಮೊಯಿಲಿ

Advertisement

Udayavani is now on Telegram. Click here to join our channel and stay updated with the latest news.

Next