Advertisement

150 ಸೀಟು ವಶ ಖಚಿತ

11:57 AM Mar 04, 2018 | |

ಕೆ.ಆರ್‌.ಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್‌ ಸರ್ಕಾರ ಅಭಿವೃದ್ಧಿಗಿಂತ ರಾಜ್ಯದ ತೆರಿಗೆ ಹಣ ಲೂಟಿ ನಡೆಸುವುದರಲ್ಲಿ ನಿರತವಾಗಿದೆ ಎಂದು ರಾಜ್ಯ ಸರ್ಕಾರ ವಿರುದ್ಧ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

Advertisement

ಕೆ.ಆರ್‌.ಪುರದ ರಾಮಮೂರ್ತಿನಗರ ಕುವೆಂಪು ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ರಕ್ಷಿಸಿ ಯಾತ್ರೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಗೂಂಡಾಗಿರಿಗೆ ಪ್ರೋತ್ಸಾಹಿಸುವ ಕುಕೃತ್ಯಗಳನ್ನೇ ನಡೆಸಿಕೊಂಡು ಬಂದಿದ್ದು, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಿಂದ ಜನ ರೋಸಿ ಹೋಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತಕ್ಕೆ ಮುಕ್ತಿ ಹಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸುವ ನಿಟ್ಟಿನಲ್ಲಿ ಪಣತೊಟ್ಟ “ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ಕೈಗೊಂಡಿದ್ದೇವೆ. ಈ ಬಾರಿ ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುವುದು ಖಚಿತ ಎಂದು ಭವಿಷ್ಯ ನುಡಿದರು.

ನಂತರ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್‌ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ರಸ್ತೆ ಚರಂಡಿ ಉದ್ಯಾನವನ ಕೊಡುಗೆ ನೀಡಲು ಯೋಗ್ಯತೆ ಇಲ್ಲದವರು ಪಾಲಿಕೆ ಕಚೇರಿಗೆ ಬೆಂಕಿ ಇಡುತ್ತಾರೆ. ಇಂತಹ ಸಂಸ್ಕೃತಿಯ ಆಡಳಿತ ನಡೆಸುವ ಕಾಂಗ್ರೆಸ್‌ ಸರ್ಕಾರ ನಮಗೆ ಬೇಕೆ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರನ್ನು ಅಪರಾಧಗಳ ರಾಜಧಾನಿಯನ್ನಾಗಿ ಮಾಡಿದ್ದರೆ. ಅವರ ಶಿಷ್ಯ, ಸ್ಥಳೀಯ ಶಾಸಕ ಬೈರತಿ ಬಸವರಾಜ್‌, ಕೃಷ್ಣರಾಜಪುರವನ್ನು ಗಾಂಜಾ ಕ್ಯಾಪಿಟಲ್‌ ಅನ್ನಾಗಿ ರೂಪಿಸಲು ಮುಂದಾಗಿದ್ದಾರೆ. ಇವೆಲ್ಲದರ ನಡುವೆ ನಗರವನ್ನು “ಪೆಟ್ರೋಲ್‌ ಕ್ಯಾನ್‌’ಗಳಿಂದ ರಕ್ಷಣೆ ಮಾಡಬೇಕಾಗಿದೆ,’ ಎಂದು ಮಾರ್ಮಿಕವಾಗಿ ನುಡಿದರು.

Advertisement

ರಾಹುಲ್‌ಗಾಂಧಿ ಕಾಲಿಟ್ಟ ಕಡೆಯೆಲ್ಲ ಕಾಂಗ್ರೆಸ್‌ ಸೋಲು ಕಂಡಿದೆ. ಮೋದಿ ಮತ್ತು ಯಡಿಯೂರಪ್ಪ ಕಾಲಿಟ್ಟ ಕಡೆಗಳಲ್ಲಿ ಹ್ಯಾಟ್ರಿಕ್‌ ಗೆಲುವು ಲಭಿಸಿದೆ. ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದೆ. ಅದೇ ರೀತಿ ಕರ್ನಾಟಕದಲ್ಲೂ ಕಮಲ ಅರಳಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತರಾತುರಿ ಶಂಕುಸ್ಥಾಪನೆ: ನಂತರ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ರಾಜ್ಯ ಸರ್ಕಾರ ಕುತಂತ್ರ ರಾಜಕಾರಣ, ಜಾತಿಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇದರೊಂದಿಗೆ ಮಠ ಮಾನ್ಯಗಳನ್ನು ತಮ್ಮ ಹದ್ದುಬಸ್ತಿಗೆ ಪಡೆಯುವ ಹುನ್ನಾರ ನಡೆಸುತ್ತಿದೆ.

ಜಾತಿಗಳ ಮಧ್ಯೆ ಒಡಕು ಮೂಡಿಸುತ್ತಿರುವ ಇಂತಹ ಮುಖ್ಯಮಂತ್ರಿಗಳು, ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ನಾಲ್ಕು ವರ್ಷಗಳಿಂದ ನಿದ್ದೆಯಲ್ಲಿದ್ದ ಸಿದ್ದರಾಮಯ್ಯನವರು ಈಗ ಎಚ್ಚೆತ್ತಿದ್ದು, ಮುಂದೆಂದೂ ತಾವು ಸಿಎಂ ಆಗುವುದಿಲ್ಲ ಎಂಬ ಸತ್ಯ ಅರಿತು ತರಾತುರಿಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯ ಸರ್ಕಾರ ಬೆಂಗಳೂರು ಹೊರವಲಯದ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ತನ್ನದೇ ಹಣ ಎಂದು ಕಾಂಗ್ರೆಸ್‌ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ.

ನಗರದಲ್ಲಿ ಸಬ್‌ಅರ್ಬನ್‌ ರೈಲು ಯೋಜನೆಗೆ ಕೇಂದ್ರ ಸರ್ಕಾರ 17000 ಕೋಟಿ ರೂ. ಕೊಟ್ಟರೆ, ಯೋಜನಾ ವೆಚ್ಚದ ಅರ್ಧ ಪಾಲನ್ನು ಭರಿಸಬೇಕಿದ್ದ ರಾಜ್ಯ ಸರ್ಕಾರ, ಕೇವಲ 300 ಕೋಟಿ ರೂ. ಕೊಟ್ಟಿದೆ ಎಂದು ಆರೋಪಿಸಿದರು.

ಸಂಸದ ಪಿ.ಸಿ.ಮೋಹನ್‌, ಬೆಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಮುನಿರಾಜ್‌, ಮಾಜಿ ಶಾಸಕ ನಂದೀಶ್‌ ರೆಡ್ಡಿ, ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಬಂಡೆ ರಾಜು, ಪದ್ಮಾವತಿ ಶ್ರೀನಿವಾಸ್‌, ಪಾಲಿಕೆ ಮಾಜಿ ಸದಸ್ಯ ಸಿದ್ದಲಿಂಗಯ್ಯ, ಗೀತಾ ವಿವೇಕನಂದ ಬಾಬು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next