Advertisement

Congress ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ 15 ಸಾವಿರ ಮಂದಿ

11:05 PM Feb 14, 2024 | Team Udayavani |

ಉಡುಪಿ: ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಫೆ. 17ರಂದು ನಡೆಯಲಿರುವ ಕಾಂಗ್ರೆಸ್‌ನ ರಾಜ್ಯ ಮಟ್ಟದ ಸಮಾವೇಶದಲ್ಲಿ ಜಿಲ್ಲೆಯಿಂದ 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕಾರ್ಯಕರ್ತರನ್ನು ಹುರಿದುಂ ಬಿಸಲು ಮತ್ತು ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆಯಾಗಿ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು ಮುಂಭಾಗದ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ. ಬೂತ್‌ಮಟ್ಟದಿಂದ ಜಿಲ್ಲಾ ಮಟ್ಟದ ವರೆಗಿನ ಎಲ್ಲ ಹಂತದ ಕಾರ್ಯಕರ್ತರು, ಪಕ್ಷದ ಮುಂಚೂಣಿ ಘಟಕದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಪ್ರಮುಖರಾದ ಕೆ.ಸಿ. ವೇಣುಗೋಪಾಲ್‌, ರೋಝೀ ಜಾನ್‌, ಸಲೀಂ ಅಹ್ಮದ್‌ ಸಹಿತ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಹಾಗೂ ದ.ಕ. ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ಮರಳಿ ಪಡೆಯುವ ಗುರಿಯೊಂದಿಗೆ ಈ ಸಮಾವೇಶ ನಡೆಯಲಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯವೂ ಆಗಲಿದೆ. ಬಿಜೆಪಿಯ ಭ್ರಷ್ಟ ಆಡಳಿತದ ಜತೆಗೆ ಧಾರ್ಮಿಕ ಭಾವನೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ತಂತ್ರದ ವಿರುದ್ಧವೂ ನಮ್ಮ ಹೋರಾಟ ನಡೆಯಲಿದೆ ಎಂದರು.

ಎರಡು ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿ ಅಂತಿಮವಾಗಿಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಅನೇಕ ಆಕಾಂಕ್ಷಿಗಳು ಇರುತ್ತಾರೆ. ಎಲ್ಲ ಭಾಗದಿಂದಲೂ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.

Advertisement

ಪ್ರಮುಖರಾದ ಎಂ.ಎ. ಗಫ‌ೂರ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಭಾಸ್ಕರ್‌ ರಾವ್‌ ಕಿದಿಯೂರು, ಮಹಾಬಲ ಕುಂದರ್‌, ಕಿರಣ್‌ ಹೆಗ್ಡೆ, ಜಯ ಕುಮಾರ ಉಪಸ್ಥಿತರಿದ್ದರು.

ಬೈಂದೂರಿನಿಂದ 5 ಸಾವಿರ ಮಂದಿ
ಕುಂದಾಪುರ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನ ಸಮಾವೇಶಕ್ಕೆ ಬೈಂದೂರಿನಿಂದ ರ್ಯಾಲಿ ನಡೆಯಲಿದ್ದು, 5 ಸಾವಿರ ಮಂದಿ ಭಾಗವಹಿಸಲಿದ್ದಾರೆ. ರಾಜ್ಯ ಸರಕಾರದ 5 ಗ್ಯಾರಂಟಿಗಳನ್ನು ಪ್ರತಿಬಿಂಬಿಸುವ ಟ್ಯಾಬ್ಲೋಗಳು ಇರಲಿವೆ ಎಂದರು.

ಹೆಜಮಾಡಿ ಬಳಿಕ ಜಿಲ್ಲೆಯ ಇತರ ಕ್ಷೇತ್ರಗಳ ಕಾರ್ಯಕರ್ತರೂ ಜತೆ ಸೇರಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ಮೊದಲ ಭೇಟಿ ಇದಾಗಿದ್ದು, ಕರ್ನಾಟಕ ಸರಕಾರದ ಗ್ಯಾರಂಟಿಗಳ ಅನುಷ್ಠಾನದ ಬಳಿಕ ನಡೆಯುವ ಮೊದಲ ಸಮಾವೇಶವೂ ಆಗಿದೆ ಎಂದರು.

ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆ ಮಾತುಕತೆ ನಡೆದಿದೆ. ಆದರೂ ಸುಕುಮಾರ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ ಯಾಕಾಗಿಲ್ಲ ಎಂಬುದಕ್ಕೆ ಅವರೇ ಉತ್ತರಿಸಬೇಕು. ಇದಕ್ಕೆ ನನ್ನ ತಕರಾರೇನೂ ಇಲ್ಲ. ಕಾಂಗ್ರೆಸ್‌ ಸಿದ್ಧಾಂತವನ್ನು ಒಪ್ಪಿ ಬರುವುದಾದರೆ ಸ್ವಾಗತ ಎಂದು ನಾನು ಹೇಳಿದ್ದೆ ಎಂದರು.

ಬೈಂದೂರು ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಶೆಟ್ಟಿ ಗುಡಿಬೆಟ್ಟು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next