Advertisement

15 ದಿನದಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕ

01:04 PM Feb 21, 2017 | |

ದಾವಣಗೆರೆ: ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ 695 ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗಿದ್ದು, 15 ದಿನಗಳಲ್ಲಿ 550 ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಎ. ಮಂಜು ತಿಳಿಸಿದ್ದಾರೆ. ಸೋಮವಾರ ನೂತನ ರೆಫರಲ್‌ ಪ್ರಯೋಗಾಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಖಾಲಿ ಇರುವಂತಹ 695 ವೈದ್ಯ ಹುದ್ದೆಯಲ್ಲಿ 550 ಹುದ್ದೆ ನೇರ ನೇಮಕಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 15 ದಿನಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 371ನೇ ಜೆ ಕಲಂ ಅಡಿ 116 ವೈದ್ಯರ ಹುದ್ದೆಗೆ ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. 1159 ಪಶು ಆಸ್ಪತ್ರೆಗಳನ್ನು  ಮೇಲ್ದರ್ಜೆಗೆ ಏರಿಸಲಾಗುವುದು. ಬಿವಿಎಂಎಸ್‌ ಪೂರೈಸಿದ ಎಲ್ಲರಿಗೂ ಉದ್ಯೋಗ ದೊರೆಯಲಿದೆ ಎಂದರು. 

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದಲ್ಲಿರುವ 56 ಸಾವಿರ ಎಕರೆ ಅಮೃತಮಹಲ್‌ ಫಾರಂನ ಸಮಗ್ರ ಅಭಿವೃದ್ಧಿಗಾಗಿ ಅಮೃತಮಹಲ್‌ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭಿಸಲಾಗುವುದು. ಅಮೃತ್‌ ಮಹಲಿನಲ್ಲಿ ಮೇವು ಬೆಳೆದು, ಅಗತ್ಯ ಇರುವ ಕಡೆ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ 55 ಗೋಶಾಲೆ ಪ್ರಾರಂಭಿಸಲಾಗಿದೆ. 

101 ಗೋಶಾಲೆಗೆ ಬೇಡಿಕೆ ಇದೆ. 95 ಮೇವು ಬ್ಯಾಂಕ್‌ ಪ್ರಾರಂಭಿಸಲಾಗಿದೆ. ತೀವ್ರ ಬರ ಇರುವ ಹಿನ್ನೆಲೆಯಲ್ಲಿ ಒಣಹುಲ್ಲಿಗೆ ಯೂರಿಯಾ ಮತ್ತು ಉಪ್ಪು ಮಿಶ್ರಣ ಮಾಡಿ, ರಸಮೇವು ತಯಾರಿಸಿ, ರೈತರಿಗೆ ವಿತರಿಸಲಾಗುವುದು. ಸರ್ಕಾರ ಮೇವುಬ್ಯಾಂಕ್‌ ಮೂಲಕ 6 ರೂಪಾಯಿಯಂತೆ ಖರೀದಿಸಿ, ರೈತರಿಗೆ ಕೆಜಿಗೆ 2 ರೂಪಾಯಿಯಂತೆ ಕೊಡುತ್ತಿದೆ. ವಾಸ್ತವಿಕವಾಗಿ ಉಚಿತವಾಗಿ ನೀಡಬೇಕಿತ್ತು.

ಎಷ್ಟು ರೈತರಿಗೆ, ಎಷ್ಟು ಪ್ರಮಾಣದಲ್ಲಿ ಮೇವು ನೀಡಲಾಗಿದೆ ಎಂಬ ನಿಖರ ಅಂಕಿ-ಸಂಖ್ಯೆಗಾಗಿ 2 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ದೇಶಿಯ ತಳಿ ಆಕಳು ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲಿ ಅಮೃತಮಹಲ್‌, ಕಿಲಾರಿ, ಮಲೆನಾಡ ಗಿಡ್ಡ, ಕೃಷ್ಣವ್ಯಾಲಿ  ತಳಿ… ಒಳಗೊಂಡಂತೆ ಒಟ್ಟು 6 ದೇಶಿ ಆಕಳು ತಳಿ ಅಭಿವೃದ್ಧಿ ಪಡಿಸಲಾಗುವುದು.

Advertisement

ಹಾಸನದಲ್ಲಿ ಕುರಿ, ಕೊಡಗಿನ ಕೂಡಗಿಯಲ್ಲಿ ಮೇಕೆ ತಳಿ ಅಭಿವೃದ್ದಿ ಪಡಿಸಲಾಗುತ್ತಿದೆ. ಕುರಿ ಒಂದೇ ಮರಿ ಹಾಕುತ್ತದೆ. ನಮ್ಮ ತಂತ್ರಜ್ಞರು ಎರಡು ಮರಿ ಹಾಕುವಂತಹ ತಳಿ ಅಭಿವೃದ್ಧಿಪಡಿಸಿದ್ದಾರೆ. ಕೆಎಂಎಫ್‌ ಮಾದರಿಯಲ್ಲಿ ಮೇಕೆ ಹಾಲಿ ಸಂಗ್ರಹಿಸಿ, ಜನರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಮೀಕ್ಷೆ ಪ್ರಕಾರ ಮಾಂಸಹಾರಿಗಳು ವಾರಕ್ಕೆ 11 ಕೆಜಿ ಮಾಂಸ ಸೇವನೆ ಮಾಡಬೇಕು. ಆದರಲ್ಲಿ ನಮ್ಮಲ್ಲಿ 2.85 ಕೆಜಿ ಮಾತ್ರ ಬಳಕೆ ಮಾಡಲಾಗುತ್ತಿದೆ.

ಈ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಪಿಎಂಸಿಗಳ ಮೂಲಕ ಮಾಂಸ ಮಾರಾಟದ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯದ ವದಾಗಾರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ಮೇಯರ್‌ ರೇಖಾ ನಾಗರಾಜ್‌, ಸದಸ್ಯ ದಿನೇಶ್‌ ಕೆ. ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next