Advertisement

ಉಡುಪಿ ಸಹಿತ ರಾಜ್ಯದಲ್ಲಿ 15 ಕಡೆ ಜವುಳಿ ಪಾರ್ಕ್‌; 10 ಸಾವಿರ ಕೋ. ರೂ. ಹೂಡಿಕೆಗೆ ಯತ್ನ

11:26 PM Oct 18, 2022 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಸುಮಾರು 10-15 ಜವುಳಿ ಪಾರ್ಕ್‌ಗಳನ್ನು ಆರಂಭಿಸಲಾಗುತ್ತಿದ್ದು, ಜವುಳಿ ಉದ್ಯಮ ಹಾಗೂ ರಫ್ತಿಗೆ ಪೂರಕವಾಗಿ ಅಂದಾಜು 10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗುವ ನಿಟ್ಟಿನಲ್ಲಿ ಸರಕಾರ ಮಹತ್ವದ ಮಾತುಕತೆ ನಡೆಸಿದೆ.

Advertisement

ಸರಕಾರ ಹಾಗೂ ಖಾಸಗಿ ಪಾಲುದಾರಿಕೆಯ ಈ ಯೋಜನೆ ಅನುಷ್ಠಾನಗೊಂಡರೆ ಜವುಳಿ ಉದ್ಯಮ ನೆಗೆತ ಹೆಚ್ಚಲಿದ್ದು, ಉದ್ಯೋಗ ಸೃಷ್ಟಿಗೂ ಸಹಕಾರಿ ಆಗಲಿದೆ.

ಪಿಪಿಪಿ ಮಾದರಿಯಲ್ಲಿ ಹೂಡಿಕೆ
ಜವುಳಿ ಉತ್ಪನ್ನಗಳ ತಯಾರು, ರಫ್ತು ಇನ್ನಿತರ ಸಾಮರ್ಥ್ಯ ರಾಜ್ಯಕ್ಕಿದ್ದರೂ, ಮುಂಬಯಿ ಇನ್ನಿತರ ನಗರಗಳನ್ನು ನೆಚ್ಚಿಕೊಳ್ಳಬೇಕಾಗಿದ್ದು, ಅದರ ಬದಲು ರಾಜ್ಯದಲ್ಲೇ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುವಂತಾಗಬೇಕೆಂಬ ಚಿಂತನೆ ರಾಜ್ಯ ಸರಕಾರದ್ದು. ಈ ನಿಟ್ಟಿನಲ್ಲಿ ಜವುಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಈಗಾಗಲೇ ಮೈಸೂರಿನಲ್ಲಿ ಹಲವು ಉದ್ಯಮಿಗಳೊಂದಿಗೆ ಚರ್ಚಿಸಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಅಂದಾಜು 10 ಸಾವಿರ ಕೋಟಿ ರೂ.ಗಳ ಹೂಡಿಕೆಗೆ ಮಾತುಕತೆ ನಡೆಸಿದ್ದಾರೆ.

ಮಹಿಳೆಯರಿಗೆ ಹೆಚ್ಚಿನ ಉದ್ಯೋಗ
ಜವುಳಿ ಪಾರ್ಕ್‌ನಿಂದ ಜವುಳಿ ಉತ್ಪಾದನೆ ವಿಧಾನ ಬದಲಾಗುತ್ತದೆ. ವೃತ್ತಿಕೌಶಲ ಹೆಚ್ಚುವ ಮೂಲಕ ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತದೆ. ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ಜವುಳಿ ಪಾರ್ಕ್‌ಗಳು ಹೆಚ್ಚಿನ ಸಹಕಾರಿ ಆಗಲಿವೆ. ವಿವಿಧ ಕಡೆಯಲ್ಲಿನ ಗಾರ್ಮೆಂಟ್‌ಗಳಲ್ಲಿ ಶೇ. 90ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಮಹಿಳೆಯರೇ ಆಗಿದ್ದು, ಆ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಕಲಬುರಗಿಯಲ್ಲಿ ಮೆಗಾ ಜವುಳಿ ಪಾರ್ಕ್‌ ನಿರ್ಮಾಣಕ್ಕೆ ಸರಕಾರ ಈಗಾಗಲೇ ಮುಂದಡಿ ಇರಿಸಿದೆ. ಒಟ್ಟಾರೆ 10ಕ್ಕೂ ಹೆಚ್ಚು ಪಾರ್ಕ್‌ಗಳು ಉತ್ತರ ಕರ್ನಾಟಕದಲ್ಲೇ ತಲೆಎತ್ತಲಿವೆ. ಅಲ್ಲದೆ, ಯುವಕರನ್ನು ಸೆಳೆಯುವ ದೃಷ್ಟಿಯಿಂದ ನೇಕಾರಿಕೆಗೆ ತಂತ್ರಜ್ಞಾನ ಸ್ಪರ್ಶ ನೀಡಲು ಮುಂದಾಗಿದೆ. ಇದಕ್ಕಾಗಿ ಅಧಿಕಾರಿಗಳು, ತಜ್ಞರಿಂದ ವರದಿ ಪಡೆಯಲು ಮುಂದಾಗಿದೆ.

Advertisement

ಜವುಳಿ ಪಾರ್ಕ್‌ ಎಲ್ಲೆಲ್ಲಿ ನಿರ್ಮಾಣ?
ಸರಕಾರವು ಸುಮಾರು 10-12 ಜಿಲ್ಲೆಗಳಲ್ಲಿ ಜವುಳಿ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಒಂದೆರಡು ಕಡೆ ನಿರ್ಮಾಣಕ್ಕೆ ಚಾಲನೆ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಹಾವೇರಿ ಜಿಲ್ಲೆಯಲ್ಲಿ 2 ಜವುಳಿ ಪಾರ್ಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉಡುಪಿ, ಚಿಕ್ಕಮಗಳೂರು, ಧಾರವಾಡ, ರಾಯಚೂರು, ದಾವಣಗೆರೆ, ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು 10-15 ಜವುಳಿ ಪಾರ್ಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಾಗ ಗುರುತಿಸುವ ಕಾರ್ಯ ನಡೆಸಲಾಗುತ್ತಿದೆ. ಧಾರವಾಡ ಜಿಲ್ಲೆಯ ರಾಯಾಪುರ ಬಳಿ ಆರಂಭವಾಗಿರುವ ಸಾಯಿ ಗಾರ್ಮೆಂಟ್ಸ್‌ನವರು 2ನೇ ಘಟಕ ಆರಂಭಕ್ಕೆ ಮುಂದಾಗಿದ್ದು, ಸರಕಾರ ಸಮ್ಮ¾ತಿಸಿದೆ.

10 ಸಾವಿರ ಕೋಟಿ ರೂ. ಹೂಡಿಕೆ?
ಜವುಳಿ ಉದ್ಯಮದಲ್ಲಿ ಅಂದಾಜು 10 ಸಾವಿರ ಕೋಟಿ ರೂ.ಗಳ ಹೂಡಿಕೆ ಭರವಸೆ ವ್ಯಕ್ತವಾಗಿದ್ದು, ಇದಕ್ಕೆ ಪೂರಕವಾಗಿ ಸರಕಾರ ಅಗತ್ಯ ಪ್ರೋತ್ಸಾಹ ನೀಡಲಿದೆ. ಜವುಳಿ ಪಾರ್ಕ್‌ ಸ್ಥಾಪನೆ ಹಾಗೂ ಉದ್ಯಮ ಸ್ಥಾಪನೆ ವೇಳೆ ಆಯಾ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ತಿಳಿಸಲಾಗಿದೆ ಎಂದು ಜವುಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next