Advertisement
ಸ್ನೇಹಿತರು, ಕುಟುಂಬದೊಂದಿಗೆ ಟ್ರಿಪ್ ಗಳಿಗೆ ಹೋಗುವುದನ್ನು ನೀವೆಲ್ಲಾ ಕೇಳಿರಬಹುದು, ನೋಡಿರಬಹುದು ಅಥವಾ ಸ್ವತಃ ಅನುಭವಿಸರಬಹುದು. ಇಲ್ಲೊಬ್ಬ ಯುವಕ ಇದೆಲ್ಲಕ್ಕಿಂತ ಭಿನ್ನವಾಗಿ ಪಯಣ ಬೆಳೆಸಿ, ಸುದ್ದಿಯಾಗಿದ್ದಾನೆ. ಕೇರಳದ ಸುಧೀಶ್ ವಯಸ್ಸು 28. ಆಗಷ್ಟೇ ಉಳಿತಾಯ, ಜವಾಬ್ದಾರಿ, ಕುಟುಂಬ ನಿಭಾಯಿಸುವುದನ್ನು ಕಲಿತ ಹುಡುಗ. ಬಾಲ್ಯದ ಶಾಲಾ ದಿನಗಳಲ್ಲಿ ಸ್ನೇಹಿತರು ಪ್ರವಾಸಕ್ಕೆ ಹೋದಾಗ ಆಸೆ ಕಣ್ಣಿನಿಂದ ಹಣವಿಲ್ಲದೇ, ಸ್ನೇಹಿತರ ಸಂಭ್ರಮವನ್ನೇ ನೋಡುತ್ತಾ ಕುಳಿತ ಚಿರ ಯುವಕನಿಗೆ ದೊಡ್ಡವನಾದ ಮೇಲೆ ತಿರುಗಾಟವೇ ಅಚ್ಚುಮೆಚ್ಚು ಆಗಿತ್ತು.
Related Articles
Advertisement
ತಿರುಗಾಟ ಸುಧೀಶ್ ಬಾಲ್ಯದ ಅಭ್ಯಾಸ, ದೂರದೂರಿಗೆ ಹೋಗಬೇಕೆನ್ನುವುದು ಅವರ ಕನಸು. ಎಲ್ಲಾ ಕಡೆ ತಿರುಗಿ ಕೊನೆಗೆ ತನ್ನ ಮೆಚ್ಚಿನ ತಾಣಕ್ಕೆ ತಲುಪಬೇಕೆಂಬುದು ಸುಧೀಶ್ ಅವರ ಬಹು ಸಮಯದ ಇಚ್ಛೆ. ಅವರ ಮೆಚ್ಚಿನ ತಾಣ ಲಡಾಖ್.
ಲಡಾಖ್ ಗೆ ಹೋಗಬೇಕು, ಅದಕ್ಕಾಗಿ ಹಣವೂ ಬೇಕು. ಮೆಡಿಕಲ್ ಸ್ಟೋರ್ ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸುಧೀಶ್ ಗೆ ಅದು ಅಷ್ಟು ಸುಲಭವಾಗಿರಲಿಲ್ಲ. ಸಂಜೆ ಆದ ಬಳಿಕ ಹಣ ಉಳಿತಾಯಕ್ಕಾಗಿ ಫುಡ್ ಡೆಲಿವೆರಿ ಬಾಯ್ ಆಗಿ ದುಡಿಯಲು ಆರಂಭಿಸಿದ್ದರು. ಒಂದಿಷ್ಟು ಹಣ ಉಳಿಸಿ ಆಯಿತು. ಯಾವುದರಲ್ಲಿ ಹೋಗುವುದು ಎನ್ನುವ ಯೋಚನೆ ಮತ್ತೆ ಕಾಡಿತು. ಹೊಸ ಬೈಕ್ ಖರೀದಿಸುವ ಯೋಜನೆಯೂ ಒಮ್ಮೆ ಬರುತ್ತದೆ. ಆದರೆ ಅದನ್ನು ಅಲ್ಲೇ ನಿಲ್ಲಿಸಿ, ಅವರು ಕೇರಳದಿಂದ ಲಡಾಖ್ ಗೆ ಹೋಗಲು ಆಯ್ದುಕೊಂಡದ್ದು, ಅವರ ಬಳಿಯೇ ಇದ್ದ 100 ಸಿಸಿ ಹೀರೋ ಹೊಂಡಾ ಬೈಕ್ ನ್ನು !
ಅದೂ ಆಯಿತು. ಆದರೆ ಹೋಗುವುದು ಯಾರೊಂದಿಗೆ ಅಂದುಕೊಂಡಾಗ, ಅವರು ತೆಗೆದುಕೊಂಡ ನಿರ್ಧಾರ ಆಗಷ್ಟೇ ತುಂಟಾಟಕ್ಕಿಳಿದು, ಬೇರೆ ನಾಯಿಗಳಿಗೆ ಎದುರು ಬೊಗಳಿ ಖದರ್ ತೋರಿಸುತ್ತಿದ್ದ ತನ್ನ ಪ್ರೀತಿಯ ಸ್ನೋಬೆಲ್ ಜೊತೆಗೆ!
ಸ್ನೋಬೆಲ್ ಜೊತೆಗೆ ಅಷ್ಟು ದೂರ ಹೋಗುವುದು ಹೇಗೆ ಎನ್ನುವುದು ಅವರಿಗೆ ಮತ್ತೆ ಯೋಚನೆ ಬರ ತೊಡಗುತ್ತದೆ. ತನ್ನ 100 ಸಿಸಿ ದ್ಚಿಚಕ್ರ ವಾಹನದಲ್ಲಿ ತನ್ನ ಲಗೇಜ್, ಬೇಕಾದ ಸಾಮಾಗ್ರಿಗಳು ಎಲ್ಲಾ ಸೇರಿದ ಮೇಲೆ ಸ್ನೋಬೆಲ್ ಹಾಗೂ ನಾನು ಆರಾಮದಾಯಕವಾಗಿ ಕೂರಲು ಸಾಧ್ಯವೇ ? ಈ ಪ್ರಶ್ನೆ ಕಾಡಿದ ಮೇಲೆ ಅವರು, ಈ ಸಂಬಂಧ ಇಂಟರ್ ನೆಟ್ ನಲ್ಲಿ ಹಲವಾರು ವಿಡಿಯೋಗಳನ್ನು ನೋಡಿ ಐಡಿಯಾಗಳನ್ನು ಪಡೆಯುತ್ತಾರೆ. ವಿದೇಶದಲ್ಲಿ ನಾಯಿಯೊಂದಿಗೆ ಪಯಣ ಮಾಡುವಾಗ ವಿಶೇಷವಾದ ಕ್ಯಾರಿಯರ್ ಗಳನ್ನು ಬೈಕ್ ನ ಸೀಟಿನ ಬಳಿ ಅಳವಡಿಸುವುದನ್ನು ಇಂಟರ್ ನೆಟ್ ನಲ್ಲಿ ನೋಡಿದ ಮೇಲೆ ಅದೇ ಮಾದರಿಯ ಕ್ಯಾರಿಯರ್ ನ್ನು ಸುಧೀಶ್ ತಮ್ಮ ಬೈಕ್ ಗೂ ಅಳವಡಿಸುತ್ತಾರೆ.
ಸ್ನೋಬೆಲ್ ಗಾಗಿ ವಿಶೇಷ ಸೀಟ್ ಮಾಡಿದ ಮೇಲೆ, ಅವನನ್ನು ಅದರಲ್ಲಿ ಕೂರಿಸಿಕೊಂಡು ಅಕ್ಕ – ಪಕ್ಕದ ಊರಿಗೆ ಹೋಗಿ ಬರುತ್ತಾರೆ. ದೂರ ಪಯಣ ಅವನಿಗೆ ಅಭ್ಯಾಸವಾಗಲಿ ಎನ್ನುವ ಕಾರಣಕ್ಕಾಗಿ ಈ ರೀತಿ ಸುಧೀಶ್ ಮಾಡುತ್ತಾರೆ.
ರಕ್ಷಿಸಿದ ನಾಯಿಯೊಂದಿಗೆ ಕನಸಿನ ಪಯಣ : ದೂರದ ಲಡಾಖ್ ಗೆ ಪ್ರಯಾಣಿಸುವ ಮುನ್ನ, ಸುಧೀಶ್ ಸ್ನೋಬೆಲ್ ನನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾಯಿಯ ಆರೋಗ್ಯ ಪರೀಕ್ಷೆ ಮಾಡಿಸುತ್ತಾರೆ. ವೈದ್ಯರು ಲಸಿಕೆ ಕೊಟ್ಟ ಬಳಿಕ ಸ್ನೋಬೆಲ್ ಗಾಗಿ ಹೆಲ್ಮೆಟ್, ಗಾಗಲ್ಸ್, ರೈನ್ ಕೋಟ್ ಖರೀದಿಸುತ್ತಾರೆ.
ದೂರದ ಪಯಣಕ್ಕೆ, ತಮ್ಮ ಖರ್ಚು, ಪೆಟ್ರೋಲ್, ಇತರ ಖರ್ಚಿಗೆ ಸುಧೀಶ್ ಇಟ್ಟುಕೊಂಡದ್ದು 50 ಸಾವಿರ ಮಾತ್ರ. ಮೇ. 8 ರಂದು ಕೇರಳದ ಎಡಪ್ಪಲ್ಲಿಯಿಂದ ಸುಧೀಶ್ – ಸ್ನೋಬೆಲ್ ಹೀರೋ ಹೊಂಡಾ 100 ಸಿಸಿಯಲ್ಲಿ ಲಡಾಖ್ ಜರ್ನಿ ಆರಂಭಿಸುತ್ತಾರೆ. ದಿನವಿಡೀ ಸುತ್ತಾಡಿ, ಪ್ರಕೃತಿಯ ಸುಂದರ ಕ್ಷಣಗಳನ್ನು ಅನುಭವಿಸಿದ ಮೇಲೆ, ರಾತ್ರಿ ಸುಧೀಶ್ ತನ್ನ ಸಾಕು ನಾಯಿ ಸ್ನೋಬೆಲ್ ಜೊತೆ ಕ್ಯಾಂಪ್ ಫೈರ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸ್ಥಳೀಯರು ಹಾಗೂ ಪೊಲೀಸರು ರಸ್ತೆ ಬದಿ ಈ ರೀತಿ ಮಾಡುವುದಕ್ಕೆ ವಿರುದ್ಧ ವ್ಯಕ್ತಪಡಿಸಿದಾಗ ಇಬ್ಬರು ರಾತ್ರಿಯೇ ಅಲ್ಲಿಂದ ಹೊರಡಬೇಕಾದ ಪರಿಸ್ಥಿತಿಗಳು ಬರುತ್ತದೆ.
ಹಗಲಿನ ವೇಳೆ ಜನರಿಗೆ ಈ ಇಬ್ಬರ ಪಯಣವನ್ನು ನೋಡುವುದೇ ಖುಷಿ. ತುಂಬಾ ಜನರು ದಾರಿ ಮಧ್ಯ ಭೇಟಿಯಾಗಿ ಮಾತನಾಡುತ್ತಾರೆ. ಗಾಗಲ್ಸ್, ಹೆಲ್ಮೆಟ್ ಹಾಕಿ ಕೂತ ಸ್ನೋಬೆಲ್ ಜೊತೆ ಫೋಟೋ ಕ್ಲಿಕ್ಕಿಸುತ್ತಾರೆ. ಕಡಿಮೆ ಖರ್ಚಿನಲ್ಲಿ ಹೊರಟ ಸುಧೀಶ್ ಬೈಕ್ ನಲ್ಲೇ ಅಡುಗೆಗೆ ಬೇಕಾದ ಎಲ್ಲವನ್ನು ಮೊದಲೇ ರೆಡಿಯಾಗಿ ತಂದಿದ್ದರು. ಮಧ್ಯಾಹ್ನದ ಊಟ ಮಾತ್ರ ಹೊರಗೆಲ್ಲಿಯಾದರೂ ಮಾಡಿ, ಬೆಳಗ್ಗೆ, ರಾತ್ರಿಗೆ ಯಾವುದಾದ್ರೂ ಲಘು ಫುಡ್ ತಯಾರಿಸಿ ಸೇವಿಸುತ್ತಿದ್ದರು.
ಜಮ್ಮು ಕಾಶ್ಮೀರ್ ಅನುಭವ ಮತ್ತು ಟ್ರೆಕ್ಕಿಂಗ್ : ಇವರಿಬ್ಬರ ಜರ್ನಿಯಲ್ಲಿ ಬರೀ ಬೈಕ್ ಪಯಣದಲ್ಲಿ ಟ್ರಕ್ಕಿಂಗ್ ಕೂಡ ಭಾಗವಾಗುತ್ತದೆ. ಮಹಾರಾಷ್ಟ್ರದ ದೊಡ್ಡ ಶಿಖರವಾಗಿರುವ ಕಲ್ಸುಬಾಯಿ ಶಿಖರವನ್ನು ಚಾರಣ ಮಾಡುತ್ತಾರೆ. ಚಾರಣದಲ್ಲಿ ನಡೆದು – ನಡೆದು ಸ್ನೋಬೆಲ್ ಕಾಲುಗಳು ಸೋತಾಗ ಅದನ್ನು ಸುಧೀಶ್ ಎತ್ತಿಕೊಂಡು ನಡೆಯುತ್ತಾರೆ. ಹಾಗೆಯೇ ಕೇದರನಾಥದಲ್ಲಿಯೂ 42 ಕಿ.ಮೀ ಚಾರಣವನ್ನು ಮಾಡುತ್ತಾರೆ.
ವಿಪರೀತ ಮಳೆಯಿಂದ ಈಶಾನ್ಯ ಭಾಗದ ಪ್ರದೇಶವನ್ನು ಬಿಟ್ಟು ಉಳಿದೆಡೆ ಸುಧೀಶ್ ಪ್ರಯಾಣಿಸುತ್ತಾರೆ. ಜಮ್ಮು – ಕಾಶ್ಮೀರಕ್ಕೆ ಮುಟ್ಟಿದ ಮೇಲೆ ಅಲ್ಲಿ ಸ್ನೋಬೆಲ್ – ಸುಧೀಶ್ ಒಂದು ವಾರ ಸುತ್ತಾಡುತ್ತಾರೆ. ಗುಲ್ಮಾರ್ಗ್ ನಲ್ಲಿಯೂ ಟ್ರೆಕ್ಕಿಂಗ್ ಮಾಡುತ್ತಾರೆ. ಸುಧೀಶ್ ತನ್ನ ಸಾಕು ನಾಯಿ ಸ್ನೋಬೆಲ್ ಜೊತೆ ಸುಮಾರು 12,000 ಕಿ.ಮೀ ಪ್ರಯಾಣಿಸಿ, ದೇಶದ 15 ರಾಜ್ಯವನ್ನು ಸುತ್ತಿ ಕಳೆದ ಜೂ.15 ರಂದು ಊರಿಗೆ ಮರಳಿದ್ದಾರೆ.
ಸುಧೀಶ್ ಬೀದಿ ನಾಯಿಯನ್ನು ರಕ್ಷಿಸಿ, ಅದರೊಂದಿಗೆ ಲಡಾಖ್ ಪ್ರಯಾಣಿಸಲು ಮತ್ತೊಂದು ಕಾರಣವೂ ಇದೆ. ನಾಯಿಗಳನ್ನು ಬೇಕಾಬಿಟ್ಟಿ ಹಿಂಸಿಸುವುದು, ಅವುಗಳನ್ನು ಕಲ್ಲು ಹೊಡೆದು ಘಾಸಿಗೊಳಿಸುವುದು ಇತ್ತೀಚಿನ ದಿನಗಳಲ್ಲಿ ನೋಡಿದ್ದೇನೆ. ಅವು ಪಾಪದ ಪ್ರಾಣಿಗಳು, ಅವುಗಳನ್ನೂ ಮನಷ್ಯರಂತೆ ಸಮಾನವಾಗಿ ನೋಡಿ, ಕೆಲವರಿಗೆ ಫಾರಿನ್ ಜಾತಿಯ ನಾಯಿಗಳೆಂದರೆ ಇಷ್ಟ, ದೇಶಿ ತಳಿಗಳನ್ನು ಕೀಳಾಗಿ ನೋಡುತ್ತಾರೆ. ಅದನ್ನು ನಾನು ಸುಳ್ಳಾಗಿಸಬೇಕು. ಸಮಾಜಕ್ಕೆ ಜೀವಿಗಳು ಕೂಡ ಮನುಷ್ಯರಿಗಿಂತ ಕಡಿಮೆಯಲ್ಲ ಎನ್ನುವುದನ್ನು ಸಾಬೀತು ಮಾಡಬೇಕು. ಅದಕ್ಕಾಗಿ ಈ ಜರ್ನಿ ಎನ್ನುತ್ತಾರೆ ಸುಧೀಶ್.
-ಸುಹಾನ್ ಶೇಕ್