ತಿರುಮಲ:ದೇಶಾದ್ಯಂತ ತೀವ್ರವಾಗಿ ಜನರನ್ನು ಕಂಗೆಡಿಸಿರುವ ಕೋವಿಡ್ 19 ಮಹಾಮಾರಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮತ್ತೊಂದೆಡೆ ಪುರಾಣ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದ 15 ಮಂದಿ ಅರ್ಚಕರಿಗೆ ಕೋವಿಡ್ 19 ಸೋಂಕು ತಗುಲಿರುವುದಾಗಿ ವರದಿ ತಿಳಿಸಿದೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿರುವ 50 ಮಂದಿ ಅರ್ಚಕರಲ್ಲಿ 15 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, 25 ಮಂದಿಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಂ) ತುರ್ತು ಸಭೆ ಕರೆದಿರುವುದಾಗಿ ವರದಿ ವಿವರಿಸಿದೆ.
ಈವರೆಗೆ ತಿರುಮಲ ತಿರುಪತಿ ದೇವಸ್ಥಾನದ ಸುಮಾರು 91 ಮಂದಿ ಕಚೇರಿ ಸಿಬ್ಬಂದಿಗೆ ಕೋವಿಡ್ 19 ಇದ್ದಿರುವುದು ಪತ್ತೆಯಾಗಿದೆ. ಜುಲೈ10ರವರೆಗೆ ತಿರುಮಲದ 1865 ಉದ್ಯೋಗಿಗಳನ್ನು ಕೋವಿಡ್ 19 ಪರೀಕ್ಷೆಗೊಳಪಡಿಸಲಾಗಿತ್ತು ಎಂದು ವರದಿ ಹೇಳಿದೆ.
ಜುಲೈ 12ರಂದು ಟಿಟಿಡಿಯ ಎಕ್ಸಿಕ್ಯೂಟಿವ್ ಅಧಿಕಾರಿ ಅನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ, ತಿರುಪತಿ ತಿರುಮಲ ದೇವಾಲಯದ 91 ಮಂದಿ ಉದ್ಯೋಗಿಗಳಿಗೆ ಕೋವಿಡ್ 19 ತಗುಲಿರುವುದನ್ನು ಭಕ್ತರಿಗೆ ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು
ಯಾವುದೇ ಭಕ್ತರಿಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ದೇವಾಲಯಕ್ಕೆ ಭೇಟಿ ನೀಡಬೇಡಿ. ಅಲ್ಲದೇ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಮನೆಗೆ ತೆರಳಿದ ನಂತರವೂ ದೂರವಾಣಿ ಮೂಲಕ ವಿಚಾರಿಸುತ್ತೇವೆ. ಜೂನ್ 18ರಿಂದ 24ರವರೆಗೆ ಸುಮಾರು 700 ಭಕ್ತರಿಗೆ ಕರೆ ಮಾಡಿದ್ದೇವೆ. ಜುಲೈ 1ರಿಂದ 7ರವರೆಗೆ 1,943 ಭಕ್ತರಿಗೆ ಕರೆ ಮಾಡಿದ್ದೇವೆ. ಎಲ್ಲರೂ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ ಎಂದು ಕುಮಾರ್ ವಿವರ ನೀಡಿದರು.