ಚಿಕ್ಕಬಳ್ಳಾಪುರ: ಕೋವಿಡ್ 19 ಲಾಕ್‌ಡೌನ್ ಪರಿಣಾಮ ಸತತ ಮೂರು ತಿಂಗಳಿಂದ ಯಾವುದೇ ಬೆಳೆ ಇಟ್ಟರೂ ಸೂಕ್ತ ಮಾರುಕಟ್ಟೆ ಜೊತೆಗೆ ನ್ಯಾಯಯುತ ಬೆಲೆ ಕೈಗೆ ಸಿಗದೇ ಆರ್ಥಿಕವಾಗಿ ತೀವ್ರ ಕಂಗಾಲಾಗಿದ್ದ ರೈತರಿಗೆ ಈಗ ಟೊಮೆಟೋ ಕೈ ಹಿಡಿದಿದ್ದು, ಬರೋಬ್ಬರಿ 15 ಕೆ.ಜಿ.ಯ ಟೊಮೆಟೋ ಬಾಕ್ಸ್ ಈಗ ಜಿಲ್ಲೆಯಲ್ಲಿ 600 ರೂ. ಗಡಿ ದಾಟಿದೆ.
ಬೆಳೆಗಾರರಿಗೆ ಶುಕ್ರದೆಸೆ: ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವ ಟೊಮೆಟೋಗೆ ಈಗ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದ್ದು, ಒಂದು ವಾರದಿಂದ ಜಿಲ್ಲೆಯಲ್ಲಿ ಟೊಮೆಟೋ ಬೆಲೆ ಗಗನಕ್ಕೇರುತ್ತಲೇ ಇದೆ. 250, 300, 450 ರೂ.ಗೆ ಮಾರಾಟವಾಗುತ್ತಿದ್ದ 15 ಕೆ.ಜಿ. ಟೊಮೆಟೋ ಬಾಕ್ಸ್ ಈಗ ಎರಡು ಮೂರು ದಿನಗಳಿಂದ 550, 600 ರೂ. ಗಡಿ ದಾಟಿದ್ದು, ಟೊಮೆಟೋ ಬೆಳೆಗಾರರಿಗೆ ಶುಕ್ರದೆಸೆ ಆರಂಭವಾಗಿದೆ.
ದಿನದಿಂದ ದಿನಕ್ಕೆ ಹೆಚ್ಚಳ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ 15 ಕೆ.ಜಿ. ಟೊಮೆಟೋ ಬಾಕ್ಸ್ 580 ರೂ.ಗೆ ಮಾರಾಟವಾದರೆ, ಚಿಂತಾಮಣಿಯಲ್ಲಿ 600 ರೂ. ಗಡಿ ದಾಟಿದೆ. ಇತ್ತೀಚೆಗೆ ಕೋವಿಡ್ 19 ಸಂಕಷ್ಟದಿಂದ ಜಿಲ್ಲೆಯ ರೈತರು ಯಾವುದೇ ಬೆಳೆ ಇಟ್ಟರೂ ಮಾರುಕಟ್ಟೆ ಇಲ್ಲದೇ ಕೈಗೆ ಬಂದ ಬೆಲೆಗೆ ಮಾರಾಟ ಮಾಡಿ ಸಾಕಷ್ಟು ಕೈ ಸುಟ್ಟುಕೊಂಡಿದ್ದರು. ಆದರೆ ಈಗ ಟೊಮೆಟೋಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದ್ದು, ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಇದೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜೂನ್, ಜುಲೈನ ಮಳೆಗಾಲದಲ್ಲಿ ಟೊಮೆಟೋ ಬೆಳೆಯುವುದು ವಾಡಿಕೆ. ಆದರೆ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಬೆಲೆ ಸಿಗುತ್ತಿದ್ದು, ಕೋವಿಡ್ 19 ಕಷ್ಟಕಾಲದಲ್ಲಿ ಟೊಮೆಟೋ ರೈತನ ಕೈಹಿಡಿದಿದೆ. ನಿತ್ಯ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಗೆ 120 ಲಾರಿ ಲೋಡ್‌ನಷ್ಟು ಟೊಮೆಟೋ ಬರುತ್ತಿದ್ದು, ಚಿಕ್ಕಬಳ್ಳಾಪುರಕ್ಕೂ 40 ರಿಂದ 50 ಲಾರಿ ಲೋಡನಷ್ಟು ಟೊಮೆಟೋ ಬರುತ್ತಿದೆ.
ರೈತರಿಗೆ ಚಿನ್ನದ ಬೆಲೆ: ಜಿಲ್ಲೆಯಲ್ಲಿ ಟೊಮೆಟೋ ಬೆಳೆದವರಿಗೆ ಬೆಲೆ ಏರಿಕೆಯಿಂದ ಚಿನ್ನದ ಬೆಲೆ ಸಿಗುತ್ತಿದ್ದು, ಮತ್ತೂಂದೆಡೆ ಬೆಲೆ ಹೆಚ್ಚಳ ಹೋಟೆಲ್ ಮಾಲೀಕರಿಗೆ ಹಾಗೂ ನಿತ್ಯ ಬಳಸುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಚಿಲ್ಲರೆಯಾಗಿ ಕೆ.ಜಿ.ಟೊಮೆಟೋ ಜಿಲ್ಲೆಯಲ್ಲಿ 50, 60 ರೂ. ಗೆ ಮಾರಾಟ ಮಾಡಲಾಗುತ್ತಿದ್ದು, ಬೆಲೆ ಏರಿಕೆ ಪರಿಣಾಮ ಗ್ರಾಹಕರು ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ.
ಈ ಬಾರಿ ಆಂಧ್ರದಲ್ಲಿ ಬಿಸಿಲಿನ ಆರ್ಭಟ ಹೆಚ್ಚಾಗಿ ಟೊಮೆಟೋ ಕೈ ಕೊಟ್ಟಿರುವುದರಿಂದ ನಮ್ಮ ಜಿಲ್ಲೆಯ ಟೊಮೆಟೋಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ 15 ಕೆ.ಜಿ. ಟೊಮೆಟೋ ಬಾಕ್ಸ್ ಮಾರುಕಟ್ಟೆಯಲ್ಲಿ 550 ರಿಂದ 600 ರೂ.ವರೆಗೂ ಮಾರಾಟವಾಗುತ್ತಿದೆ. ಇನ್ನೂ ಬೆಲೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.
-ತಮ್ಮೇಪಲ್ಲಿ ಮಂಜುನಾಥರೆಡ್ಡಿ, ಎಪಿಎಂಸಿ ಉಪಾಧ್ಯಕ್ಷರು, ಚಿಂತಾಮಣಿ
* ಕಾಗತಿ ನಾಗರಾಜಪ್ಪ