Advertisement

ತಣ್ಣೀರುಪಂತ ಗ್ರಾಮವೊಂದರಲ್ಲೇ 15 ಮನೆ ಶೌಚಾಲಯ ರಹಿತ !

07:35 AM Aug 28, 2017 | Team Udayavani |

ಉಪ್ಪಿನಂಗಡಿ: ದ.ಕ.ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವಂತೆಯೇ ಸರಕಾರ ನಡೆಸುತ್ತಿರುವ ಶೌಚಾಲಯಗಳ ಗಣತಿ ವೇಳೆ ಭಿನ್ನ ನೈಜಾಂಶಗಳು ಅನಾವರಣಗೊಳ್ಳಲಾರಂಭಿಸಿವೆ. ಬೆಳ್ತಂಗಡಿ ತಾ|ನ ತಣ್ಣೀರು ಪಂತ ಗ್ರಾಮವೊಂದರಲ್ಲೇ 15 ಮನೆಗಳು ಶೌಚಾಲಯ ರಹಿತ ಎಂದು ಪತ್ತೆಯಾಗಿ ಪಂಚಾಯತ್‌ ಆಡಳಿತವನ್ನು ಕಂಗೆಡಿಸಿದೆ.

Advertisement

ಸ್ವತ್ಛ ಭಾರತ ಮಿಷನ್‌ ಕಾರ್ಯಕ್ರಮದಡಿ ದ.ಕ. ಜಿಲ್ಲೆಯನ್ನು ಬಯಲುಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಮನೆಗಳಲ್ಲಿ ಶೌಚಾಲಯವನ್ನು ಹೊಂದಿಕೊಂಡು ಬಳಕೆ ಮತ್ತು ನಿರ್ವಹಣೆ ಮಾಡುತ್ತಿರುವ ಬಗ್ಗೆ ಸಾಮಾಜಿಕ ಪರಿಶೋಧನಾ ಕಾರ್ಯ ಆಗಸ್ಟ್‌ 16ರಿಂದ ಸೆಪ್ಟಂಬರ್‌ 2ರ ವರೆಗೆ ಜಿಲ್ಲೆಯಾದ್ಯಂತ ನಡೆಯುತ್ತಿದೆ.

ತಣ್ಣೀರುಪಂತ ಗ್ರಾಮದ ಸಾಮಾನ್ಯ ಸಭೆಯಲ್ಲಿ ಪಿಡಿಒ ಈ ವಿಚಾರವನ್ನು ಪ್ರಸ್ತಾವಿಸುತ್ತಿದ್ದಂತೆಯೇ ಸದಸ್ಯರಿಂದ ಕಳವಳ ವ್ಯಕ್ತವಾಯಿತು. ಶೌಚಾಲಯ ರಹಿತ ಮನೆಗಳ ಪೈಕಿ ಓರ್ವ ನಿವೃತ್ತ ಸರಕಾರಿ ನೌಕರನ ಮನೆಯೂ ಸೇರಿದೆ. ಬ್ಯಾಂಕ್‌ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿಯಿರಿಸಿದ್ದರೂ ಈ ನಿವೃತ್ತ ಸರಕಾರಿ ನೌಕರ ಇನ್ನೂ ಬಯಲು ಶೌಚಾಲಯದಲ್ಲಿ ಪರಮ ಸುಖ ಕಾಣುತ್ತಿರುವುದು ವಿಪರ್ಯಾಸ ಎಂದರು.

ಸಿಬಂದಿ ಜತೆ ಗಣತಿ ಕಾರ್ಯಕ್ಕೆ ಹೋಗಿದ್ದ ಪಿಡಿಒ ಪೂರ್ಣಿಮಾ ಅವರು ತನ್ನ ಅನುಭವಗಳನ್ನು ವಿವರಿಸಿದ್ದು ಹೀಗೆ….
ಶೌಚಾಲಯ ನಿರ್ಮಾಣಕ್ಕೆ ಸರಕಾರದಿಂದ ಹಣಕಾಸಿನ ನೆರವು ಲಭಿಸುತ್ತದೆ ಎಂದು ಅರಿತಾಗ ಹಲವು ಮಂದಿ ತಮ್ಮ ಮನೆ ಯಲ್ಲಿ ಶೌಚಾಲಯ ಇದ್ದರೂ ಇಲ್ಲ ಎನ್ನುತ್ತಿದ್ದರು. ಎದು ರಲ್ಲಿ ಕಾಣಿಸುವಂತಿದ್ದರೆ ಅದು ಎಂದೋ ಕೆಟ್ಟು ಹೋಗಿ ಉಪ ಯೋಗಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಸುಳ್ಳು ಹೇಳುತ್ತಿದ್ದರು.”ಯಾವೆಲ್ಲ ಮನೆಗಳಲ್ಲಿ ಶೌಚಾಲಯ ಇಲ್ಲವೋ ಅಂತಹ ಮನೆಗಳಿಗೆ ಪಡಿತರ ಸಹಿತ ಎಲ್ಲ ಸೌಲಭ್ಯಗಳನ್ನು ರದ್ದುಪಡಿಸುವ ಸಲುವಾಗಿ ಗಣತಿ ನಡೆಯುತ್ತಿದೆ’ ಎಂದು ಹೇಳಿದಾಗ ಮಾತಿನ ವರಸೆ ಬದಲಾಯಿಸುತ್ತಾ “ಇಲ್ಲ ಇಲ್ಲ ನಮ್ಮ ಮನೆಯ ಶೌಚಾಲಯ ಸರಿಯಾಗಿ ಇದೆ. ಸ್ವಲ್ಪ ಸಮಸ್ಯೆ ಇದೆ. ಅದನ್ನು ನಾವೇ ಸರಿ ಪಡಿಸಿಕೊಳ್ಳುತ್ತೇವೆ. ನೀವು ಯಾವುದೇ ಸೌಲಭ್ಯವನ್ನು ಕಡಿತಗೊಳಿಸಬೇಡಿ’ ಎಂದು ಅಂಗಲಾಚುತ್ತಿದ್ದರು ಎಂದು ವಿವರಿಸಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತ್ತು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಶೌಚಾಲಯ ಹೊಂದಿರದ 15 ಮನೆಗಳು ಪತ್ತೆಯಾದ ಬಗ್ಗೆ ಖೇದ ವ್ಯಕ್ತಪಡಿಸಿದ ಪಂಚಾಯತ್‌ ಅಧ್ಯಕ್ಷ ಜಯವಿಕ್ರಂ ಅವರು, ತನ್ನ ಮೂರು ತಿಂಗಳ ಗೌರವಧನವನ್ನು ಓರ್ವ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ವಿನಿಯೋಗಿಸುವುದಾಗಿ ತಿಳಿಸಿದರು. ಸಂಘ-ಸಂಸ್ಥೆಗಳೂ ಕೈ ಜೋಡಿಸುವಂತೆ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next