ಬೆಂಗಳೂರು: ವಾರಾಂತ್ಯದ ಕರ್ಫ್ಯೂ ಮುಗಿಯುತ್ತಿರುವಂತೆಯೇ ಸಂಪೂರ್ಣ ಲಾಕ್‌ಡೌನ್ ಹೇರಿಕೆ ಆಗಲಿದೆಯೇ?
ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ವಾರಾಂತ್ಯ ಕರ್ಫ್ಯೂ ರಾಜ್ಯಾದ್ಯಂತ ಯಶಸ್ವಿ ಆಗಿದ್ದು, ಸಾರ್ವಜನಿಕರು ನೀಡಿದ ಸಹಕಾರವು ಸರಕಾರಕ್ಕೆ ಧೈರ್ಯ ತಂದಿದೆ. ಹೀಗಾಗಿ ಮುಂದಿನ ಒಂದು ತಿಂಗಳು ಪ್ರತೀ ವಾರಾಂತ್ಯ ಕರ್ಫ್ಯೂ ಅಥವಾ ಕೂಡಲೇ ಹದಿನೈದು ದಿನ ಪೂರ್ಣ ಪ್ರಮಾಣದ ಲಾಕ್‌ಡೌನ್ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ. ಸೋಮವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ವಾರಾಂತ್ಯ ಕರ್ಫ್ಯೂ ಅಥವಾ ಲಾಕ್‌ಡೌನ್ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿದ್ದಾರೆ. ಬಹುತೇಕ ಸಚಿವರು ವಾರಾಂತ್ಯದ ಕರ್ಫ್ಯೂ ಮುಂದುವರಿಸಲು ಒಲವು ತೋರಿದ್ದಾರೆ. ಆದರೆ ತಜ್ಞರು ಲಾಕ್‌ಡೌನ್‌ಗೆ ಸಲಹೆ ನೀಡಿದರೆ ಸಮ್ಮತಿಸುವುದು ಸೂಕ್ತ ಎಂದು ಕೆಲವರು ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಆಯಾ ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ಅನಂತರ ಸಿಎಂ ಅವರು ತಾಂತ್ರಿಕ ಸಮಿತಿಯ ಸದಸ್ಯರ ಜತೆಗೂ ಚರ್ಚಿಸುವ ಸಾಧ್ಯತೆಯಿದೆ.
ಇದನ್ನೂ ಓದಿ :ಸೋಂಕಿನಿಂದ ಬಳಲುತ್ತಿರುವವರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಿ : ಸಚಿನ್ ಮನವಿ
ಲಾಕ್‌ಡೌನ್‌ಗೆ ಕೈಗಾರಿಕೆ ಮತ್ತು ವಾಣಿಜ್ಯ ವಲಯದಿಂದ ವಿರೋಧವಿದೆ. ಲಾಕ್‌ಡೌನ್ ಹೇರಿದರೆ ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳ ಸಹಿತ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಒದಗಿಸುವಂತೆ ವಿಪಕ್ಷಗಳು ಬೇಡಿಕೆ ಮಂಡಿಸಿದ್ದು, ಸರಕಾರ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ, “ಈಗಿನ ಪರಿಸ್ಥಿತಿಯಲ್ಲಿ ಸೋಮವಾರದಿಂದ ಕರ್ಫ್ಯೂ ಮುಂದುವರಿಸಿದರೂ ಒಳ್ಳೆಯದೇ’ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿರುವುದು ಸರಕಾರದ ಮಟ್ಟದಲ್ಲಿ ಆ ಕುರಿತು ಚರ್ಚೆ ನಡೆಯುತ್ತಿರುವುದಕ್ಕೆ ಇಂಬು ಕೊಟ್ಟಿದೆ.