ಸವಣೂರು: ಕುದ್ಮಾರು ಗ್ರಾಮದ ಬರೆಪ್ಪಾಡಿಯಿಂದ ಶಾಂತಿಮೊಗರು ರಸ್ತೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕೈಗೂಡುವ ಸಾಧ್ಯತೆ ನಿಚ್ಚಳವಾಗಿದೆ. ಈ ರಸ್ತೆ ಡಾಮರು ಕಾಣದೇ ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗಿತ್ತು.ಇತ್ತೀಚೆಗಷ್ಟೇ ಸುಮಾರು 14 ಲಕ್ಷ ರೂ. ವೆಚ್ಚದ ಶಾಂತಿಮೊಗರು ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಬಳಿಕ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ರಸ್ತೆ ಹದಗೆಟ್ಟಿದ್ದು, ಕೆಸರಿನಿಂದಾಗಿ ವಾಹನ ಸವಾರರು, ಪಾದಚಾರಿಗಳು ಕಷ್ಟಪಡುವ ಸ್ಥಿತಿ ಇದೆ. ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳುವ ಮುನ್ನವೇ ರಸ್ತೆಗೂ ಕಾಯಕಲ್ಪ ದೊರೆತೀತೆಂಬ ನಿರೀಕ್ಷೆ ಸಾರ್ವಜನಿಕರಲ್ಲಿತ್ತು. ಇದಕ್ಕೆ ಪೂರಕವಾಗಿ ಆಲಂಕಾರು ರಸ್ತೆಯು 6.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿತ್ತು.
ಕೊನೆಗೂ ಕಾಯಕಲ್ಪ
ಬೆಳಂದೂರು ಜಿ.ಪಂ.ವ್ಯಾಪ್ತಿಯ ಕುದ್ಮಾರು ಗ್ರಾಮದ ಬರೆಪ್ಪಾಡಿಯಿಂದ ಶಾಂತಿಮೊಗರು ರಸ್ತೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ಕೊನೆಗೂ 1.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇದನ್ನು ಖಚಿತಪಡಿಸಿರುವ ಶಾಸಕ ಎಸ್. ಅಂಗಾರ, ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪ್ರಸಿದ್ಧ ದೇವಸ್ಥಾನಗಳಾದ ಶರವೂರು ಹಾಗೂ ಶಾಂತಿಮೊಗರು, ಹೆಸರಾಂತ ಕೂರ ಮಸೀದಿಗೆ ಇದೇ ಸೇತುವೆಯ ಮೂಲಕ ರಾಜ್ಯದಿಂದ ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಈ ಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ಮೈಸೂರು, ಮಡಿಕೇರಿ, ಸುಳ್ಯ, ಬೆಳ್ಳಾರೆ ಭಾಗದ ಯಾತ್ರಿಕರು ಸವಣೂರು ಬರೆಪ್ಪಾಡಿಗಾಗಿ ಧರ್ಮಸ್ಥಳ ಸಂಪರ್ಕಿಸಲು ಹತ್ತಿರವಾಗಿದೆ.
ಕಾಮಗಾರಿ ಆರಂಭಗೊಳ್ಳಲಿದೆ
ಬರೆಪ್ಪಾಡಿಯಿಂದ ಶಾಂತಿಮೊಗರು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ 1.5ಕೋಟಿ ರೂ.ಮಂಜೂರು ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ.
– ಎಸ್.ಅಂಗಾರ, ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ
ಉದಯವಾಣಿ ವರದಿ
ಈ ಕುರಿತು ಉದಯವಾಣಿ ಜು.25ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ ಸಮಸ್ಯೆಯ ಕುರಿತು ಬೆಳಕು ಚೆಲ್ಲಲಾಗಿತ್ತು.
– ಪ್ರವೀಣ್ ಚೆನ್ನಾವರ