Advertisement

15 “ಕೈ’ಶಾಸಕರು ಸಂಪರ್ಕದಲ್ಲಿ: ಕಟೀಲ್‌

02:44 PM Jul 31, 2020 | mahesh |

ರಾಮನಗರ: “15 ಮಂದಿ ಕಾಂಗ್ರೆಸ್‌ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ತಾಲೂಕಿನ ಜಯಪುರ ಕ್ರಾಸ್‌ ಬಳಿಯ ಖಾಸಗಿ ಕಲ್ಯಾಣ ಮಂದಿರದಲ್ಲಿ ನಡೆದ ಬಿಜೆಪಿ ನೂತನ ಪದಾಧಿಕಾರಿಗಳ ಸಭೆಯಲ್ಲಿ ಭಾಗವ ಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಎಲ್‌ಸಿ ಹಾಗೂ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್‌ ಮತ್ತೆ ಕಾಂಗ್ರೆಸ್‌ ಸೇರುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು. ಮಾಜಿ ಸಿಎಂ ಹಾಗೂ ಚನ್ನಪಟ್ಟಣ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡುತ್ತಿದ್ದಾರೆ ಎಂದು ಎಂಎಲ್‌ಸಿ ಸಿ.ಪಿ.ಯೋಗೇಶ್ವರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

Advertisement

ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನವಿಲ್ಲ: ಇತ್ತೀಚೆಗಷ್ಟೇ ರಾಮನಗರದ ವಿವಿಧ ಮಂಡಲಗಳಿಗೆ ನೇಮಕವಾಗಿರುವ ಪದಾಧಿಕಾರಿಗಳ ವಿಚಾರದಲ್ಲಿ ಭುಗಿಲೆದ್ದಿರುವ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸಿ, ಜಿಲ್ಲಾ ಬಿಜೆಪಿಯಲ್ಲಿ ಯಾವ ಅಸಮಾಧಾನವೂ ಇಲ್ಲ. ವ್ಯವಸ್ಥೆ ಯೊಳಗೆ ಕೆಲವು ವ್ಯತ್ಯಾಸವಿದೆ ಎಂಬುದಾಗಿ ಕೆಲವರು ತಮ್ಮ ಬಳಿ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದನ್ನು ಪರಿಹರಿಸಿಕೊಡುತ್ತೇನೆ ಎಂದರು.

ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿಯಲ್ಲಿ ಅನುಶಾಸನವಿದೆ. ಅದನ್ನು ಎಲ್ಲರೂ ಪಾಲಿಸಬೇಕು. ಪಕ್ಷದ ಬಗ್ಗೆ ಯಾರಲ್ಲೂ ಅಸಮಾಧಾನವಿಲ್ಲ. ಭಾವನೆಗಳಲ್ಲಿ ವ್ಯತ್ಯಾಸವಿರಬಹುದು. ಈ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳ ಬಗ್ಗೆ ತಮ್ಮ ಬಳಿ
ಹೇಳಿಕೊಂಡಿದ್ದಾರೆ. ಯಾರೂ, ಯಾರ ಬಗ್ಗೆಯೂ ಅಸಮಾಧಾನ ಹೇಳಿಕೊಂಡಿಲ್ಲ ಎಂದರು.

ಪದಾಧಿಕಾರಿಗಳ ಸಭೆ: ಈ ಮುನ್ನ ಜಿಲ್ಲೆಯ ವಿವಿಧ ಮಂಡಲಗಳಿಗೆ ನೇಮಕವಾಗಿರುವ 51 ಮಂದಿ ನೂತನ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕಟೀಲ್‌, ಸಂಘಟನೆಗೆ ಹೆಚ್ಚು ಒತ್ತು ಕೊಡುವಂತೆ ಸಲಹೆ, ಸೂಚನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿ
ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್‌, ಜಿಲ್ಲಾ
ಪ್ರಧಾನ ಕಾರ್ಯದರ್ಶಿ ರುದ್ರದೇವರು, ಮಾಧ್ಯಮ ಪ್ರಮುಖ್‌ ಚಂದ್ರಶೇಖರ ರೆಡ್ಡಿ, ನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ.ಶಿವಾನಂದ ಮತ್ತಿತರರಿದ್ದರು.

Advertisement

ಭುಗಿಲೆದ್ದ ಅಸಮಾಧಾನ
ರಾಮನಗರ: ಬಿಜೆಪಿ ಜಿಲ್ಲಾ, ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳು ನೇಮಕವಾದ ಬೆನ್ನಲ್ಲೇ ಅಸಮಾಧಾನ ಭುಗಿಲೇಳುತ್ತಿದ್ದು, ಗುರುವಾರ ರಾಮನಗರಕ್ಕೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಬಳಿ ಕೆಲವರು, ಅಸಮಾಧಾನ ತೋಡಿಕೊಂಡಿದ್ದಾರೆ. ಅಧ್ಯಕ್ಷರಿಗೆ ಬರೆದ ಪತ್ರದ ಪ್ರತಿ ವಾಟ್ಸಪ್‌ ಗ್ರೂಪ್‌ಗ್ಳಲ್ಲಿ ಹರಿದಾಡುತ್ತಿದೆ. ಜಿಲ್ಲೆಯ 7 ಮಂಡಲಗಳ ಪೈಕಿ 5 ಮಂಡಲಗಳಲ್ಲಿ ಪಕ್ಷದ ಸಂಘಟನೆಗೆ ತೊಡಕಾಗಲಿದೆ ಎಂದು ಅಧ್ಯಕ್ಷರ ಗಮನ ಸೆಳೆಯಲಾಗಿದೆ. ನೂತನ ಜಿಲ್ಲಾಧ್ಯಕ್ಷರ ವಿರುದ್ಧ ಪತ್ರ ದಲ್ಲಿ ಹರಿಹಾಯಲಾಗಿದೆ. ನೂತನ ಪದಾಧಿಕಾರಿಗಳ ನೇಮಕ ಮತ್ತು ಘೋಷಣೆ
ಆತುರದಿಂದ ಕೂಡಿದೆ ಎಂದೂ ದೂರಲಾಗಿದೆ. ಈ ವಿಚಾರದಲ್ಲಿ ರಾಜ್ಯ ಅಧ್ಯಕ್ಷರು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆಯೂ ವಿನಂತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next