Advertisement

ಸಂಗಮ ಕ್ಷೇತ್ರ ಅಭಿವೃದ್ಧಿಗೆ ಕುಂಭಮೇಳದಲ್ಲಿ 14 ನಿರ್ಣಯ

07:30 AM Feb 20, 2019 | Team Udayavani |

ತಿ. ನರಸಿಪುರ: ಕಾವೇರಿ, ಕಪಿಲೆ ಹಾಗೂ ಸ್ಫಟಿಕ ಸರೋವರದಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಸರ್ಕಾರದಿಂದ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ 11ನೇ ಮಹಾಕುಂಭ ಮೇಳದಲ್ಲಿ ಪ್ರಮುಖ 14 ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಒಪ್ಪಿಸಲಾಯಿತು.

Advertisement

ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕೈಲಾಸಾಶ್ರಮದ ಜಯೇಂದ್ರಪುರ ಸ್ವಾಮೀಜಿ, ಓಂಕಾರ ಹಿಲ್ಸ್‌ನ ಮಧುಸೂದನಾನಂದಪುರಿ ಸ್ವಾಮೀಜಿ ಹಾಗೂ

ಕಾಗಿನೆಲೆ ಸಂಸ್ಥಾನದ ಶಿವನಂದಪುರ ಸ್ವಾಮೀಜಿಗಳನ್ನು ಒಳಗೊಂಡಿರುವ ಕುಂಭಮೇಳ ಟ್ರಸ್ಟ್‌ ತೆಗೆದುಕೊಂಡಿರುವ 14 ನಿರ್ಣಯಗಳ ಪತ್ರಿಯನ್ನು ಮಂಗಳವಾರ ನಡೆದ ಧರ್ಮಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ನೀಡಲಾಯಿತು. ಕುಂಭ ಮೇಳದ ಟ್ರಸ್ಟ್‌ನ ಪರವಾಗಿ ಆದಿಚುಂಚನ ಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ವಿವಿಧ ಮಠಾಧೀಶರು ಸೇರಿ ಮನವಿ ಪತ್ರ ಸಲ್ಲಿಸಿದರು.

ನಿರ್ಣಯಗಳು
1.ದಕ್ಷಿಣ ಭಾರತದ ಏಕೈಕ ಈ ಮಹಾಕುಂಭಮೇಳಕ್ಕೆ ಸರ್ವಧರ್ಮಿಯರು ಮತ್ತು ವಿವಿಧ ಪಂಥದವರು ಭಾಗವಹಿಸುವುದರಿಂದ ಕೇಂದ್ರ ಸರ್ಕಾರವು ಇದನ್ನು ರಾಷ್ಟ್ರೀಯ ಭಾವೈಕ್ಯತಾ ಮೇಳವಾಗಿ ಪರಿಗಣಿಸಿ, ಇಡೀ ದೇಶದಿಂದ ಆಗಮಿಸುವ ಭಕ್ತರಿಗೆ ಪುಣ್ಯಸ್ಥಾನ ಮಾಡಲು ಅನುಕೂಲ ಕಲ್ಪಿಸಿ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು.

2.ಸಂಗಮ ಕ್ಷೇತ್ರದವ್ಯಾಪ್ತಿಯಲ್ಲಿ ಸೋಪಾನಗಳನ್ನು ನಿರ್ಮಿಸಿ ಅಗತ್ಯ ಸ್ನಾನಘಟ್ಟ, ಅಲಂಕಾರಕ ಕೊಠಡಿ ಶೌಚಾಲಯ ನಿರ್ಮಿಸಿಕೊಡಬೇಕು.

Advertisement

3.ದೇಶದ ವಿವಿಧ ಭಾಗಗಳಿಂದ ಬರುವ ಭಕ್ತರಿಗಾಗಿ ಸುಸಜ್ಜಿತ ವಿಶ್ರಾಂತಿ ಕೊಠಡಿ ನಿರ್ಮಿಸಿಕೊಡಬೇಕು.

4.ತ್ರಿವೇಣಿ ಸಂಗಮವಾದ ಮೂರು ನದಿಗಳ ಮಧ್ಯಭಾಗದಲ್ಲಿ ಮರಳು ತೆಗೆಯುವುದನ್ನು ಶಾಶ್ವತವಾಗಿ ನಿಷೇಧಿಸಬೇಕು.

5.ತ್ರಿವೇಣಿ ಸಂಗಮ ಕ್ಷೇತ್ರವನ್ನು ರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಪರಿಗಣಿಸಿ ಅಭಿವೃದ್ಧಿ ಪಡಿಸಬೇಕು.

6. ಶಾಶ್ವತವಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ವಿಶಾಲವಾದ ಸುಸಜ್ಜಿತ ಭವ್ಯಭವನ ನಿರ್ಮಿಸಬೇಕು.

7. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳವನ್ನು ಸರ್ಕಾರದ ಕಾರ್ಯಕ್ರಮ ಎಂದು ಘೋಷಿಸಿರುವುದರಿಂದ ಅಭಿವೃದ್ಧಿ ಯೋಜನೆಗಳನ್ನು ಶಾಶ್ವತವಾಗಿ ಜಾರಿಗೊಳಿಸಬೇಕು.

8.ಸಂಗಮದ ದಂಡೆಯಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿ, ಭಕ್ತಾಧಿಗಳ ಪೂಜೆಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು.

9. ನದಿ ಮಧ್ಯಭಾಗಕ್ಕೆ ಆಗಮಿಸುವ ಸ್ನಾನಾರ್ಥಿಗಳಿಗಾಗಿ ಅಗತ್ಯವಾದ ಶಾಶ್ವತ ತೂಗುಸೇತುವೆ ನಿರ್ಮಿಸಬೇಕು.

10. ಸುಮಾರು 25 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಶ್ರೀ ಅಗಸ್ತೇಶ್ವರ ರಥವನ್ನು ಆಧುನಿಕ ರೀತಿಯಲ್ಲಿ ನಿರ್ಮಿಸಬೇಕು.

11.ಸಂಗಮ ಕ್ಷೇತ್ರದ ಸುತ್ತಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು.

12.ನದಿ ಪಾತ್ರದಲ್ಲಿ ವಾಸಿಸುವ ಗ್ರಾಮಗಳ ಹಾಗೂ ಬಡಾವಣೆಗಳ ಕೊಳಚೆ ನೀರನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸಲು ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸಬೇಕು.

13.ಕ್ಷೇತ್ರದ ಸ್ವತ್ಛತೆಗೆ ಅಗತ್ಯ ಹಾಗೂ ಶಾಶ್ವತವಾದ ಯೋಜನೆಗಳನ್ನು ರೂಪಿಸಿ, ಅನುಷ್ಠಾನ ಮಾಡಬೇಕು.

14.ನದಿ ಮಧ್ಯಭಾಗದಲ್ಲಿ ಇರುವ ರುದ್ರಪಾದನ ಬಳಿ ಭಕ್ತರು ಸುಗಮವಾಗಿ ಪೂಜೆ ಸಲ್ಲಿಸಲು ಶಾಶ್ವತ ಹಾಗೂ ಸುರಕ್ಷಿತವಾದ ಮಾರ್ಗವನ್ನು ನಿರ್ಮಿಸಿಕೊಡಬೇಕು ಎಂಬ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next