Advertisement

Dakshina Kannada ಜಿಲ್ಲೆಯಲ್ಲಿ 14,840 ಪ್ರಕರಣ ಇತ್ಯರ್ಥ

12:26 AM Sep 10, 2023 | Team Udayavani |

ಮಂಗಳೂರು/ಉಡುಪಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕುಗಳ ನ್ಯಾಯಾಲಯಗಳ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು.

Advertisement

48 ಬೈಠಕ್‌ಗಳು ನಡೆದಿದ್ದು 21,763 ಪ್ರಕರಣಗಳನ್ನು ಪರಿಗಣಿಸಲಾಗಿತ್ತು. ಅದರಲ್ಲಿ 14,840 ಪ್ರಕರಣಗಳು ರಾಜಿಯಾಗಿದ್ದು, 17,97,64,778 ರೂ. ಪರಿಹಾರ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶೋಭಾ ಬಿ.ಜಿ. ತಿಳಿಸಿದ್ದಾರೆ.

ಅದಾಲತ್‌ನಲ್ಲಿ ಸಾರ್ವಜನಿಕರ ವ್ಯಾಜ್ಯಪೂರ್ವ, ರಾಜಿಯಾಗಬಹುದಾದ ಅಪರಾಧಿತ ಪ್ರಕರಣಗಳು, ಚೆಕ್‌ ಪ್ರಕರಣಗಳು, ಬ್ಯಾಂಕ್‌ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣಗಳು, ಸಿವಿಲ್‌ ಪ್ರಕರಣಗಳು, ಆಸ್ತಿ ವಿಭಾಗದ ಪ್ರಕರಣಗಳು ಹಾಗೂ ಇತರ ರಾಜಿಯಾಗಬಹುದಾದ ಪ್ರಕರಣಗಳನ್ನು ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೇ ಇತ್ಯರ್ಥಪಡಿಸಲಾಯಿತು.

91 ಲ.ರೂ.ಗೆ ರಾಜಿ ಸಂಧಾನ ಪತ್ರ ಸಲ್ಲಿಸಿದ ವಿಮಾ ಸಂಸ್ಥೆ !
ಉಡುಪಿ: ಅಪಘಾತ ವಿಮಾ ಪರಿಹಾರಕ್ಕೆ ಸಂಬಂಧಪಟ್ಟಂತೆ ಯುನಿವರ್ಸಲ್‌ ಸೋಂಪೊ ಜನರಲ್‌ ಇನ್ಶೂರೆನ್ಸ್‌ ವಿಮಾ ಸಂಸ್ಥೆಯು 91ಲ.ರೂ. ಪರಿಹಾರವನ್ನು ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿ ರಾಜಿ ಸಂಧಾನ ಪತ್ರವನ್ನು ಸಲ್ಲಿಸಿತು.

ಉಡುಪಿ ನಗರಸಭೆಯ ಉದ್ಯೋಗಿ ಯೊಬ್ಬರು 2021ರ ಜ. 16ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮೃತರ ವಾರಸುದಾರರು ಉಡುಪಿಯ ಪ್ರದಾನ ಸಿವಿಲ್‌ ಜಡ್ಜ್ ಅವರ ನ್ಯಾಯಾಲಯದಲ್ಲಿ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅಪಘಾತ ನಡೆಸಿದ ಕಾರಿನ ವಿಮೆಯು ಯುನಿವರ್ಸಲ್‌ ಸೊಂಪೊ ಜನರಲ್‌ ಇನ್ಶೂರೆನ್ಸ್‌ ಸಂಸ್ಥೆಗೆ ಒಳಪಟ್ಟಿತ್ತು. ವಿಮಾ ಸಂಸ್ಥೆಯು ಈ ಪ್ರಕರಣವನ್ನು ಸಂಸ್ಥೆಯ ನ್ಯಾಯವಾದಿಯ ಅಭಿಪ್ರಾಯ ಪಡೆದು ರಾಜಿ ಯೋಗ್ಯ ಪ್ರಕರಣವೆಂದು ತೀರ್ಮಾನಿಸಿ ಅರ್ಜಿದಾರರಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ.
ಅರ್ಜಿದಾರರು ಮತ್ತು ವಿಮಾ ಸಂಸ್ಥೆ ರಾಜಿ ಸಂಧಾನ ಪತ್ರಕ್ಕೆ ಸಹಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಖಾಸಗಿ ವಿಮಾಸಂಸ್ಥೆ ಅಪಘಾತ ವಿಮಾ ಪ್ರಕರಣದಲ್ಲಿ ಇಷ್ಟೊಂದು ದೊಡ್ಡಮಟ್ಟದ ಪರಿಹಾರ ಘೋಷಿಸಿರುವುದು ಉಡುಪಿ ಜಿಲ್ಲಾ ಲೋಕ ಅದಾಲತ್‌ನಲ್ಲಿ ಇದೇ ಮೊದಲ ಪ್ರಕರಣವಾಗಿದೆ ಎಂದು ವಿಮಾ ಸಂಸ್ಥೆಯ ನ್ಯಾಯವಾದಿ ಎಚ್‌. ಆನಂದ ಮಡಿವಾಳ ತಿಳಿಸಿದ್ದಾರೆ.

Advertisement

ಸಂಧಾನದ ಮೂಲಕ ಒಂದಾದ ಹಿರಿಯ ದಂಪತಿ
ಉಡುಪಿ: ಭಿನ್ನಾಭಿಪ್ರಾಯದಿಂದ ದೂರವಾಗಿದ್ದ 64 ವರ್ಷದ ವ್ಯಕ್ತಿ ಮತ್ತು 52 ವರ್ಷದ ಮಹಿಳೆ ನ್ಯಾಯಾಧೀಶರು ಹಾಗೂ ನ್ಯಾಯವಾದಿಯ ಮಧ್ಯಸ್ಥಿಕೆಯಿಂದ ಮತ್ತೆ ಒಂದಾದ ಘಟನೆ ಅದಾಲತ್‌ನಲ್ಲಿ ನಡೆಯಿತು. ಇವರಿಗೆ ಓರ್ವ ಪುತ್ರ (17) ಹಾಗೂ ಪುತ್ರಿ (21) ಇದ್ದಾರೆ. 2000ರಲ್ಲಿ ಇವರ ಮದುವೆಯಾಗಿದ್ದು, ಕಾರಣಾಂತರಗಳಿಂದ 2021ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2022ರಲ್ಲಿ ತಿಂಗಳಿಗೆ 10 ಸಾವಿರ ರೂ. ಜೀವನಾಂಶ ನೀಡುವಂತೆ ಕೋರ್ಟ್‌ ಪತಿಗೆ ಆದೇಶಿಸಿತ್ತು. ಬಳಿಕ ಪ್ರತ್ಯೇಕವಾಗಿ ಪತಿ ಹಾಗೂ ಹೆಂಡತಿ ಮಕ್ಕಳು ವಾಸಮಾಡಿಕೊಂಡಿದ್ದರು. ಈ ನಡುವೆ ಪತ್ನಿಗೆ ಅನಾರೋಗ್ಯ ಇದ್ದ ಕಾರಣ ಕಳೆದ 3 ತಿಂಗಳುಗಳಿಂದ ದಂಪತಿ, ಮಕ್ಕಳು ಒಟ್ಟಿಗೆ ವಾಸಮಾಡಿಕೊಂಡಿದ್ದಾರೆ. ಈ ನಡುವೆ ಅದಾಲತ್‌ನಲ್ಲಿ ಶನಿವಾರ ಸಂಧಾನ ನಡೆದು ಹಿರಿಯ ಜೀವಗಳು ಮತ್ತೆ ಒಂದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next