Advertisement

147 ಕುಟುಂಬಗಳು ಅತಂತ್ರ

06:55 AM Jan 11, 2018 | |

ಕುಂದಾಪುರ: ಕಂದಾವರ ಗ್ರಾಮದ ಸಟ್ವಾಡಿಯಲ್ಲಿ 9.5 ಎಕರೆ ಸರಕಾರಿ ಜಾಗದಲ್ಲಿ ತಾತ್ಕಾಲಿಕ ಮನೆ, ಶೆಡ್‌, ಜೋಪಡಿಗಳನ್ನು ನಿರ್ಮಿಸಿ ವಾಸಿಸುತ್ತಿದ್ದ 147 ಕುಟುಂಬಗಳಿಗೆ ಬುಧವಾರ ಬೆಳ್ಳಂಬೆಳಗ್ಗೆ ಆಘಾತ ಎದುರಾಯಿತು. ತಹಶೀಲ್ದಾರ್‌ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ 4-5 ತಿಂಗಳಿನಿಂದ ಕಟ್ಟಿಕೊಂಡಿದ್ದ ಮನೆಗಳನ್ನು 2 ಗಂಟೆಯೊಳಗೆ ನೆಲಸಮಗೊಳಿಸಿದ್ದಾರೆ.

Advertisement

ಕುಂದಾಪುರ ಉಪವಿಭಾಗದ ಸುಮಾರು 200 ಕ್ಕೂ ಹೆಚ್ಚು ಪೋಲೀಸ್‌ ಸಿಬಂದಿಯ ನೆರವಿನಿಂದ‌ ತಹಶೀಲ್ದಾರ್‌ ಜಿ.ಎಂ. ಬೋರ್ಕರ್‌ ನೇತೃತ್ವದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಅಲ್ಲಿಗೆ ಬಂದು 50 ಕೂಲಿಯಾಳುಗಳು, ಜೆಸಿಬಿ ಬಳಸಿ ಶೆಡ್‌, ತಾತ್ಕಾಲಿಕ ಮನೆಗಳನ್ನು ಕೆಡವಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಸಿಪಿಎಂ ಮುಖಂಡರ ಸಹಿತ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ.


ಮುನ್ಸೂಚನೆಯೇ ನೀಡಿಲ್ಲ
ಕಳೆದ ಅಕ್ಟೋಬರ್‌ನಲ್ಲಿ 13 ಕುಟುಂಬಗಳು ತಾತ್ಕಲಿಕ ಗುಡಿಸಲುಗಳನ್ನು, ಆ ಬಳಿಕ ಮತ್ತಷ್ಟು ಮಂದಿ ಈ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಈ ಬಗ್ಗೆ ಇದು ಸರಕಾರಿ ಜಾಗ, ಇಲ್ಲಿಂದ ಮನೆಗಳನ್ನು ತೆರವುಗೊಳಿಸಿ ಎಂದು ತಹಶೀಲ್ದಾರರು ನೋಟೀಸು ಕೊಟ್ಟಿದ್ದರು. ಕಂದಾವರದಲ್ಲಿ ಬಾಡಿಗೆ ಮನೆಗಳಲ್ಲಿದ್ದ ಈ ಕುಟುಂಬಗಳು ಅದನ್ನು ಬಿಟ್ಟು ಇಲ್ಲಿ ಬಂದು ಶೆಡ್‌, ಜೋಪಡಿಗಳಲ್ಲಿ ವಾಸಿಸುತ್ತಿದ್ದರು. ಬೇರೆ ಸೂರಿನ ವ್ಯವಸ್ಥೆಯಿಲ್ಲದ ಕಾರಣ ಇಲ್ಲೇ ನೆಲೆಸಿದ್ದರು. ಆದರೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಮನೆಗಳ ಕೆಡವಿದ್ದಾರೆ. 

ಮನೆ ನಿವೇಶನಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕೆಲವು ಗುಡಿಸಲುಗಳಿಗೆ ಬೆಂಕಿ ಬಿದ್ದಿದ್ದು ಇದರಿಂದ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. 

ನಷ್ಟ ಪರಿಹಾರ ನೀಡಿ
ನಿವೇಶನ ರಹಿತರು 24 ಎಕರೆ ಜಾಗದಲ್ಲಿ ಮನೆ ನಿರ್ಮಿಸಿ ನೆಲೆಸಿದ್ದವರ ಮೇಲೆ ಅಧಿಕಾರಿಗಳು ಪೋಲಿಸ್‌ ಬಲ ಬಳಸಿ ತೆರವುಗೊಳಿಸಿರುವುದು ಖಂಡನೀಯ. ನಿವೇಶನ ರಹಿತ ದಲಿತರಿಗೆ ಮನೆ ನಿವೇಶನದ ಹಕ್ಕುಪತ್ರ ಮತ್ತು ನಷ್ಟ ಪರಿಹಾರವನ್ನು ಕೂಡಲೇ ಸರಕಾರವು ನೀಡಬೇಕು. ಸರಕಾರದಿಂದ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದು ಕರ್ಣಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಕೋಣಿ ಎಚ್ಚರಿಸಿದ್ದಾರೆ.    

               
ಎಎಸ್‌ಪಿ ಭೇಟಿ, ಬಿಗಿಭದ್ರತೆ
ಉಡುಪಿ ಎಎಸ್‌ಪಿ ಕುಮಾರಚಂದ್ರ ಭೇಟಿ ನೀಡಿ, ಪರಿಶೀಲಿಸಿದರು. ಕುಂದಾಪುರ ಡಿವೈಎಸ್‌ಪಿ ಪ್ರವೀಣ್‌ ನಾಯಕ್‌, ಕುಂದಾಪುರ ಎಸ್‌ಐ ಹರೀಶ್‌, ಕಂಡೂÉರು ಎಸ್‌ಐ ಶ್ರೀಧರ್‌ ನಾಯ್ಕ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಂದಾವರ ಸಟ್ಟಾಡಿ ಭಾಗದ ಎಲ್ಲ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ತಪಾಸಣೆ ನಡೆಸಿ ವಾಹನಗಳನ್ನು ಒಳಗೆ ಬಿಡಲಾಗುತ್ತಿತ್ತು. 


ನಾವೀಗ ಎಲ್ಲಿಗೆ ಹೋಗಬೇಕು
ನಾವು ಕೂಲಿ ಕೆಲಸ ಮಾಡಿ ದುಡಿದು ತಿನ್ನುವವರು. ಕಷ್ಟಪಟ್ಟು ಈ ಸರಕಾರಿ ಜಾಗದ 5 ಸೆಂಟ್ಸ್‌ನಲ್ಲಿ ಒಂದು ಸಣ್ಣ- ಸಣ್ಣ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ನಮಗೆ ಬೇರೆ ದಿಕ್ಕಿಲ್ಲ. ಆದರೆ ಈ ಅಧಿಕಾರಿಗಳು ಬೆಳಗ್ಗೆ- ಬೆಳಗ್ಗೆ ಬಂದು ಮನೆಗಳನ್ನು ಕೆಡವಿ ಹಾಕಿದ್ದಾರೆ. ಮೊದಲೇ ಹೇಳಿದ್ದರೆ ನಾವೇ ಏನಾದರೂ ಬೇರೆ ದಾರಿ ನೋಡಿಕೊಳ್ಳುತ್ತಿದ್ದೇವು. ನಾವೀಗ ಎಲ್ಲಿಗೆ ಹೋಗಬೇಕು. ಬಾಡಿಗೆ ಮನೆಯೂ ಇಲ್ಲ. ಇಲ್ಲಿದ್ದ ಮನೆಗಳು ಇಲ್ಲ. 
– ರೇಷ್ಮಾ ಸಚ್ಚಿಂದ್ರ, ಸಂತ್ರಸ್ತರು

ಅಮಾನವೀಯ ವರ್ತನೆ
ಲಕ್ಷಾಂತರ ರೂ. ಸಾಲ ಮಾಡಿ ಬಡವರು ನಿರ್ಮಿಸಿದ ಮನೆಗಳನ್ನು ಪೊಲೀಸ್‌ ರಕ್ಷಣೆಯೊಂದಿಗೆ ಕೆಡವಿವುರುವುದು ಅಮಾನವೀಯ ವರ್ತನೆ. ಇದರಲ್ಲಿ 70ಕ್ಕೂ ಹೆಚ್ಚು ಮನೆಗಳು ಪರಿಶಿಷ್ಟ ಜಾತಿಯವರಿಗೆ ಸೇರಿದ್ದಾಗಿದೆ. ಸರಕಾರ, ಅಧಿಕಾರಿಗಳು ಈ ಬಡ ಕುಟುಂಬಗಳಿಗೆ ಅನ್ಯಾಯ ಮಾಡಿದೆ.
– ಸುರೇಶ್‌ ಕಲ್ಲಾಗರ್‌, ಸಿಪಿಎಂ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next