Advertisement

ನಾಲ್ಕು ವರ್ಷಗಳ‌ಲ್ಲಿ  ನಾಡಿಗೆ ಬಂದ 143 ಚಿರತೆಗಳ ಸೆರೆ

07:30 AM Feb 07, 2018 | Team Udayavani |

ಮೈಸೂರು: ಆಹಾರ ಅರಸಿ ನಾಡಿಗೆ ಬರುವ ಚಿರತೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾಡಿಗೆ ಬಂದ 143 ಚಿರತೆಗಳನ್ನು ಸೆರೆಹಿಡಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಹಾಗೂ ಮೈಸೂರು ಮೃಗಾಲಯದ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ನಿಶಾಚರ ಪ್ರಾಣಿಯಾದ ಚಿರತೆ ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಸಂಚರಿಸುತ್ತದೆ. ಚಿರತೆಗಳ ಆವಾಸ ಸ್ಥಾನ ಅರಣ್ಯ ಪ್ರದೇಶವಾಗಿದ್ದರೂ ಹೆಚ್ಚು ವನ್ಯಪ್ರಾಣಿಗಳು ಕಂಡುಬರುವ ಪ್ರದೇಶಗಳಲ್ಲೂ ಹೊಂದಿಕೊಳ್ಳಬಲ್ಲದು. ಚಿರತೆಯು ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತದೆ. ಹೆಚ್ಚಾಗಿ ಜಿಂಕೆ, ದನಕರುಗಳು, ನಾಯಿ ಇದರ ಬೇಟೆಯಾಗಿದೆ.

ನಗರೀಕರಣ, ಕೈಗಾರಿಕೀಕರಣ, ರಸ್ತೆ ಹಾಗೂ ರೈಲು ಮಾರ್ಗ, ನೀರಾವರಿ ಯೋಜನೆಗಳು… ಇವುಗಳಿಂದ ಅರಣ್ಯ ನಾಶವಾಗುತ್ತಿದೆ. ಹೀಗಾಗಿ ಚಿರತೆಗೆ ಜಿಂಕೆಗಳನ್ನು ಬೇಟೆಯಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಲಭವಾಗಿ ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ವನ್ಯಜೀವಿ ತಜ್ಞರು ಮಾಹಿತಿ ನೀಡುತ್ತಾರೆ.

ಅಸಮರ್ಪಕ ವಿಲೇವಾರಿ: ಚಿರತೆಗಳು ನಾಡಿನತ್ತ ಬರಲು ಪ್ರಮುಖ ಕಾರಣ ಅಸಮರ್ಥಕ ವಿಲೇವಾರಿಯಾಗಿದೆ. ಜನವಸತಿ ಪ್ರದೇಶಗಳಲ್ಲಿ ಹಾಗೂ ಅವುಗಳ ಸುತ್ತಮುತ್ತ ಜನರು ನಡೆಸುವ ಧಾರ್ಮಿಕ ಆಚರಣೆಗಳಲ್ಲಿ ಮಿಕ್ಕ ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಕಲ್ಯಾಣ ಮಂಟಪ, ಸಮುದಾಯ ಭವನ ಇನ್ನಿತರ ಕಡೆ ನಡೆಯುವ ಸಭೆ-ಸಮಾರಂಭದಲ್ಲಿ ಮಿಕ್ಕ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ.

ನಗರ  ಮತ್ತು  ಜನವಸತಿ  ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿ ಇಲ್ಲದಿರುವುದು. ಕಸಾಯಿ ಖಾನೆಗಳಲ್ಲಿನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯುವುದರಿಂದ ಇಂತಹ ಸ್ಥಳಗಳಲ್ಲಿ ಆಹಾರ ತಿನ್ನಲು ನಾಯಿಗಳು ಬರುತ್ತವೆ. ಈ ಸಂದರ್ಭದಲ್ಲಿ ನಾಯಿಗಳನ್ನು ಸುಲಭವಾಗಿ ಬೇಟೆಯಾಡಲು ಚಿರತೆಗಳು ಬರುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ.

Advertisement

ಮೃಗಾಲಯಕ್ಕೂ ಲಗ್ಗೆ: 2017ರ ಅ.26ರಂದು ಮೈಸೂರು ಮೃಗಾಲಯಕ್ಕೆ ಬಂದಿದ್ದ ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿತ್ತು. ಕೆಲ ದಿನಗಳ ಹಿಂದೆ ಮೈಸೂರಿನ ಜೆ.ಪಿ.ನಗರ ಬಡಾವಣೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

ಸಮಾಲೋಚನಾ ಸಭೆ: ಸೂಕ್ತ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಹಾಗೂ ಮೈಸೂರು ಮೃಗಾಲಯದ ವತಿಯಿಂದ ಫೆ.8ರಂದು ಸಂಜೆ 4ಗಂಟೆಗೆ ಮೃಗಾಲಯದ ಆವರಣದಲ್ಲಿ ಸಮಾಲೋಚನಾ ಸಭೆ ಏರ್ಪಡಿಸಲಾಗಿದೆ. ಇಲ್ಲಿ ಮೈಸೂರು ಮಹಾ ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸ್ವಯಂಸೇವಾ ಸಂಸ್ಥೆಗಳು, ಪರಿಸರವಾದಿಗಳು ಹಾಗೂ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲಾಗುತ್ತದೆ. ಚಿರತೆ ಹಾವಳಿ ತಡೆಗೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳು ಮತ್ತು ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಚರ್ಚೆ ನಡೆಯಲಿದೆ. ಚಿರತೆಗಳ ಆಹಾರ ಪದ್ಧತಿ, ಅವುಗಳ ಚಲನವಲನ, ಸೆರೆ ಹಿಡಿಯುವ ವಿಧಿವಿಧಾನಗಳು ಇತ್ಯಾದಿಗಳ ಬಗ್ಗೆ ಕಿರುಚಿತ್ರದ ಮೂಲಕ ಅಗತ್ಯ ಮಾಹಿತಿ ನೀಡಲಾಗುವುದು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದ್ದಾರೆ.

ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next