ಜಮ್ಮು: ಕಣಿವೆ ರಾಜ್ಯದ ಪ್ರಮುಖ ನಗರಗಳಾದ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯಗಳಲ್ಲಿ ಅತೀವವಾಗಿ ಮಂಜು ಸುರಿದ ಪರಿಣಾಮ, ಹಿಮಾಚ್ಛಾದಿತ ಸ್ಥಳಗಳಲ್ಲಿ ದಾರಿಕಾಣದೆ ಸಿಲುಕಿಹಾಕಿಕೊಂಡಿದ್ದ 141 ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಎಎನ್-32 ಕಾರ್ಗಿಲ್ ಕೊರಿಯರ್ ವಿಮಾನದಲ್ಲಿ 105 ಮಂದಿ ಹಾಗೂ ಪವನ್ ಹನ್ಸ್ ಸೇವೆಗಳಲ್ಲೊಂದಾದ ಎಂಐ-172 ವಿಮಾನದಲ್ಲಿ ಉಳಿದ 36 ಮಂದಿಯನ್ನು ಸ್ಥಳಾಂತರಿಸಲಾಯಿತು.
ತೆರವುಗೊಂಡಿರುವ ಒಟ್ಟು ಜನರಲ್ಲಿ 39 ಮಂದಿ ಜಮ್ಮುವಿನಿಂದ ಕಾರ್ಗಿಲ್‌ಗೆ ಕಾರಣಾಂತರಗಳಿಂದ ಬಂದಿದ್ದವರಾಗಿದ್ದರು. ಇನ್ನು, 16 ಮಂದಿ ಕಾರ್ಗಿಲ್‌ನಿಂದ ಜಮ್ಮುವಿಗೆ, 12 ಜನ ಕಾರ್ಗಿಲ್‌ನಿಂದ ಶ್ರೀನಗರಕ್ಕೆ ಹಾಗೂ 38 ಜನರು ಶ್ರೀನಗರದಿಂದ ಕಾರ್ಗಿಲ್‌ಗೆ ಬಂದಿದ್ದವರಾಗಿದ್ದರು. ಹಿಮಚ್ಛಾದಿತ ಪ್ರದೇಶಗಳಲ್ಲಿ ಇನ್ನಷ್ಟು ಜನರು ಸಿಲುಕಿಹಾಕಿಕೊಂಡಿರಬಹುದೆಂಬ ಅನುಮಾನಗಳಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ಜನವರಿಯಲ್ಲಿ ಅತಿಯಾದ ಹಿಮಪಾತವಾದ ಹಿನ್ನೆಲೆಯಲ್ಲಿ 434 ಕಿ.ಮೀ. ದೂರದ ಶ್ರೀನಗರ- ಲೇಹ್ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆಗಿನಿಂದಲೂ ಪ್ರಯಾಣಿಕರು ಅನ್ಯ ಮಾರ್ಗಗಳನ್ನು ಬಳಸಿ ಹತ್ತಿರ ಪಟ್ಟಣಗಳಿಗೆ ಓಡಾಡುತ್ತಿದ್ದು, ಕೆಲವರು ಹಿಮಪಾತದಲ್ಲಿ ಸಿಲುಕಿಹಾಕಿಕೊಳ್ಳುತ್ತಿದ್ದಾರೆ. ಅಂಥವನ್ನು ಹುಡುಕಲು ವಾಯುಪಡೆಯ ಸಿ-17, ಸಿ – 130 ಹಾಗೂ ಎ.ಎನ್.-32 ವಿಮಾನಗಳನ್ನು ಬಳಸಲಾಗುತ್ತಿದೆ.