Advertisement

ಅಮೆರಿಕದಲ್ಲಿ ನಿತ್ಯ 140 ಲಕ್ಷ ಲೀ. ಹಾಲು ಚರಂಡಿ ಪಾಲು

03:18 PM Apr 16, 2020 | mahesh |

ವಾರ್ಷಿಂಗ್ಟನ್‌: ಕೋವಿಡ್‌ ವೈರಸ್‌ ಜಗತ್ತಿನಾದ್ಯಂತ ಆಹಾರ ಸರಪಣಿಯನ್ನು ಅಸ್ತವ್ಯಸ್ತಗೊಳಿಸಿದೆ. ಹಾಲು, ಮಾಂಸ, ಮೊಟ್ಟೆ, ತರಕಾರಿಯಿಂದ ಹಿಡಿದು ಎಲ್ಲ ಆಹಾರ ವಸ್ತುಗಳ ಪೂರೈಕೆ ಮತ್ತು ಬೇಡಿಕೆಯಲ್ಲಿ ಅಗಾಧ ಅಂತರ ಸೃಷ್ಟಿಸಿದೆ. ಅಮೆರಿಕದಲ್ಲಂತೂ ಇದು ಬಹಳ ತೀವ್ರಗೊಂಡಿದೆ. ಒಂದೆಡೆ ಆಹಾರಕ್ಕಾಗಿ ಜನರು ಹಾಹಾಕಾರ ಎಬ್ಬಿಸುತ್ತಿದ್ದರೆ ಇನ್ನೊಂದೆಡೆ ಸಮರ್ಪಕ ಸಾಗಾಟ ವ್ಯವಸ್ಥೆಯಿಲ್ಲದೆ ಟನ್‌ಗಟ್ಟಲೆ ಆಹಾರ ವಸ್ತುಗಳು ವ್ಯರ್ಥವಾಗುತ್ತಿವೆ. ಅಮೆರಿಕವೊಂದರಲ್ಲೇ ನಿತ್ಯ 140 ಲಕ್ಷ ಲೀಟರ್‌ ಹಾಲನ್ನು ಚರಂಡಿಗೆ ಚೆಲ್ಲುತ್ತಿದ್ದಾರೆ.

Advertisement

ಇದು ಒಂದು ಉದಾಹರಣೆ ಮಾತ್ರ. ಬ್ರಿಟನ್‌ನಲ್ಲೂ ಹೈನುಗಾರರು ಹಾಲು ಮತ್ತು ಇತರ ಹೈನು ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯ ವಾಗದೆ ಕಂಗಾಲಾಗಿದ್ದಾರೆ. ನಿತ್ಯ 50 ಲಕ್ಷ ಲೀ. ಹಾಲು ವ್ಯರ್ಥವಾಗುತ್ತಿದೆ ಎಂದಿದ್ದಾರೆ ಹೈನುಗಾರರ ಸಂಘಟನೆಯ ಮುಖ್ಯಸ್ಥರಾದ ಪೀಟರ್‌ ಅಲ್ವಿಸ್‌.  ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳು ಸ್ಥಿತಿಯೂ ಇದೇ ರೀತಿ ಇದೆ. ಪಟ್ಟಣಗಳಲ್ಲಿ ಜನರು ತರಕಾರಿ, ಬೇಳೆಕಾಳುಗಳಿಗಾಗಿ ಪರದಾಡುತ್ತಿದ್ದರೆ ಹಳ್ಳಿಗಳಲ್ಲಿ ಅವುಗಳನ್ನು ಕೇಳುವವರಿಲ್ಲ ಎಂಬಂತಾಗಿದೆ. ಕೆಲವೆಡೆ ದಾಸ್ತಾನು ಅಧಿಕವಾಗಿ ಬೆಲೆ ನೆಲಕಚ್ಚಿದೆ. ಹಣ್ಣುಹಂಪಲುಗಳ ಪರಿಸ್ಥಿತಿಯೂ ಇದೇ ಆಗಿದೆ.

ವಾರಕ್ಕೆ 7.5 ಲಕ್ಷ ಮೊಟ್ಟೆ ನಾಶ
ನ್ಯೂಯಾರ್ಕ್‌ನ ಹೊರಭಾಗದ ಫಾರ್ಮ್ ಒಂದರಲ್ಲಿ ವಾರಕ್ಕೆ 7.5 ಲಕ್ಷ ಮೊಟ್ಟೆಗಳನ್ನು ನಾಶ ಮಾಡಲಾಗುತ್ತಿದೆ. ಮೊಟ್ಟೆಗೆ ಬೇಡಿಕೆ ಇದ್ದರೂ ಸಾಗಾಟ ಸಮಸ್ಯೆಯಾಗಿದೆ. ಅಲ್ಲದೆ ನಿರ್ಬಂಧಗಳಿರುವುದರಿಂದ ಜನರಿಗೆ ಖರೀದಿ ಸಮಸ್ಯೆಯಾಗುತ್ತಿದೆ. ಓರ್ವ ರೈತ ಟನ್‌ಗಟ್ಟಲೆ ಕೊಳೆತ ಈರುಳ್ಳಿಯನ್ನು ಇಟ್ಟುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.

ಬದಲಾದ ಖರೀದಿ ಹವ್ಯಾಸ
ಲಾಕ್‌ಡೌನ್‌ ಅವಧಿಯಲ್ಲಿ ಜನರ ಖರೀದಿ ಹವ್ಯಾಸವೂ ಬದಲಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಜನರು ಸ್ವಯಂ ಬ್ರೆಡ್‌ ಹಾಗೂ ಇತರ ಬೇಕಿಂಗ್‌ ಐಟಂಗಳನ್ನು ಮಾಡುತ್ತಿದ್ದು, ಇದರಿಂದಾಗಿ ಹಿಟ್ಟಿಗೆ ವಿಪರೀತ ಬೇಡಿಕೆಯಿದೆ. ಫ್ರಾನ್ಸ್‌ನಲ್ಲಿ ಸಾವಯವ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದೆ.

ಡಾರ್ಜಿಲಿಂಗ್‌ ಚಹಾಕ್ಕೂ ಸಂಕಷ್ಟ
ಲಾಕ್‌ಡೌನ್‌ ಬಿಸಿ ಭಾರತದ ಚಹಾ ಮಾರುಕಟ್ಟೆಗೂ ತಟ್ಟಿದೆ. ಪ್ರಸಿದ್ಧ ಡಾರ್ಜಿಲಿಂಗ್‌ ಚಹಾದ ರಫ್ತು ಸಾಧ್ಯವಾಗದೆ ದಾಸ್ತಾನು ಪ್ರಮಾಣ ಏರಿಕೆಯಾಗುತ್ತಿದೆ. ಕೆಲವು ಚಹಾ ತೋಟಗಳಲ್ಲಿ ಕೊಯ್ಲಿಗೆ ಕಾರ್ಮಿಕರ ಕೊರತೆಯಿಂದಾಗಿ ಎಲೆಗಳು ಒಣಗಿ ಉದುರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next