ಒಂದು ಆಡಿಯೋ ಕಂಪೆನಿ ಮಾಡೋಣ ಅಂತ 2004ರಲ್ಲೇ ಗುರುಕಿರಣ್‌ಗೆ ಹೇಳಿದ್ದರಂತೆ ನಿರ್ಮಾಪಕ ಯೋಗಿ ದ್ವಾರಕೀಶ್. ಆದರೆ, ಅದಕ್ಕೆ ಗುರುಕಿರಣ್ ಒಪ್ಪಿಲ್ಲ. “ಅದೆಲ್ಲಾ ಸುಲಭ ಅಲ್ಲ, ಮಾರ್ಕೆಟ್ ಗೊತ್ತಿರಬೇಕು’ ಅಂತ ಹೇಳಿ ಸುಮ್ಮನಾದರಂತೆ. ಅದಾಗಿ 14 ವರ್ಷಗಳ ನಂತರ ಕೊನೆಗೂ ಗುರು ಮನಸ್ಸು ಮಾಡಿದ್ದಾರೆ. “ಆಪ್ತಮಿತ್ರ’ ಅಲ್ಲದಿದ್ದರೂ, ದ್ವಾರಕೀಶ್ ನಿರ್ಮಾಣದ “ಅಮ್ಮ ಐ ಲವ್ ಯೂ’ ಚಿತ್ರದ ಹಾಡುಗಳನ್ನು ತಮ್ಮದೇ ಸಂಸ್ಥೆಯ ಮೂಲಕ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂಸ್ಥೆಗೆ ಗುರುಕಿರಣ್ ಒಬ್ಬರೇ ಅಲ್ಲ, ದ್ವಾರಕೀಶ್ ಸಹ ಕೈಜೋಡಿಸಿದ್ದಾರೆ. ಅದೇ ಕಾರಣಕ್ಕೆ ಡಿಜಿಕೆ ಆಡಿಯೋ ಎಂದು ಹೆಸರಿಡಲಾಗಿದೆ. ಡಿಜಿಕೆ ಎಂದರೆ, ದ್ವಾರಕೀಶ್-ಗುರುಕಿರಣ್ ಎಂದರ್ಥ. ಈ ಡಿಜಿಕೆ ಆಡಿಯೋದ ಮೊದಲ ಚಿತ್ರವಾಗಿ “ಅಮ್ಮ ಐ ಲವ್ ಯೂ’ ಹೊರಬಂದಿದೆ.
ಇತ್ತೀಚೆಗೆ ಡಿಜಿಕೆ ಉದ್ಘಾಟನೆಯ ಜೊತೆಗೆ “ಅಮ್ಮ ಐ ಲವ್ ಯೂ’ ಚಿತ್ರದ ಹಾಡುಗಳನ್ನು ಒಟ್ಟಿಗೆ ಬಿಡುಗಡೆ ಮಾಡಲಾಯಿತು. ಈ ಟೂ-ಇನ್-ಕಾರ್ಯಕ್ರಮಕ್ಕೆ ಸಾಕಷ್ಟು ಜನ ಬಂದಿದ್ದರು. ಇನ್ನು ಸೆಲೆಬ್ರಿಟಿಗಳ ಪೈಕಿ ಹಿರಿಯ ನಿರ್ದೇಶಕ ಭಾರ್ಗವ, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ಧ್ರುವ ಸರ್ಜಾ, ವಿ. ಮನೋಹರ್, ಸಾಧು ಕೋಕಿಲ, ಚಿಕ್ಕಣ್ಣ, ವಸಿಷ್ಠ ಸಿಂಹ, ಶ್ರೀಧರ್ ಸಂಭ್ರಮ್, ಕವಿರಾಜ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸಾಕಷ್ಟು ಜನ ಬಂದಿದ್ದರು. ಬಂದವರೆಲ್ಲರೂ ದ್ವಾರಕೀಶ್ ನಿರ್ಮಾಣದ 51ನೇ ಚಿತ್ರವಾದ “ಅಮ್ಮ ಐ ಲವ್ ಯೂ’ಗೆ ಮತ್ತು ಚಿತ್ರತಂಡದವರಿಗೆ ಶುಭ ಕೋರಿದರು. ಅಂದಹಾಗೆ, ಚಿರಂಜೀವಿ ಸರ್ಜಾ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ಈ ಚಿತ್ರವನ್ನು ಕೆ.ಎಂ. ಚೈತನ್ಯ ನಿರ್ದೇಶಿಸಿದ್ದಾರೆ.
ಈ ಆಡಿಯೋ ಸಂಸ್ಥೆ ಪ್ರಾರಂಭಿಸುವ ಐಡಿಯಾ ನಾಲ್ಕೈದು ದಿನಗಳದ್ದು ಎನ್ನುತ್ತಾರೆ ಗುರುಕಿರಣ್. “ದ್ವಾರಕೀಶ್ ಮತ್ತು ಯೋಗಿ ನನ್ನ ಲಕ್ಕಿ ನಿರ್ಮಾಪಕರು ಅಂದರೆ ತಪ್ಪಿಲ್ಲ. ನನಗೆ ಕ್ಲಾಸಿಕಲ್ ಸಂಗೀತ ಸಂಯೋಜಿಸುವುದಕ್ಕೆ ಬರುವುದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾಗ, ನನ್ನ ನಂಬಿ “ಆಪ್ತಮಿತ್ರ’ ಚಿತ್ರವನ್ನು ನನಗೆ ಕೊಟ್ಟರು. ಈ ಆಡಿಯೋ ಸಂಸ್ಥೆಯಲ್ಲಿ ನಾನು ಯೋಗಿಯ ಪಾಟ್ನìರ್ ಎಂದು ಖುಷಿ ಇದೆ. ಕೇವಲ ನಾಲ್ಕೈದು ದಿನಗಳ ಹಿಂದೆ ಇವೆಲ್ಲಾ ಪ್ಲಾನ್ ಆಯಿತು. ಈಗ ಸಂಸ್ಥೆಯ ಮೊದಲ ಚಿತ್ರವಾಗಿ “ಅಮ್ಮ ಐ ಲವ್ ಯೂ’ ಬರುತ್ತಿದೆ. ಇದು ಬರೀ ನನ್ನ ಸಂಗೀತ ನಿರ್ದೇಶನದ ಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಸಂಗೀತ ನಿರ್ದೇಶಕರಿಗೂ ಒಂದು ವೇದಿಕೆ. ಯಾರ ಹಾಡುಗಳನ್ನು ಬೇಕಾದರೂ ಬಿಡುಗಡೆ ಮಾಡುವುದಕ್ಕೆ ನಾವು ಸಿದ್ಧ’ ಎಂದು ಹೇಳಿಕೊಂಡರು ಗುರುಕಿರಣ್.
ಇನ್ನು ಆಡಿಯೋ ಕಂಪೆನಿ ಉದ್ಘಾಟಿಸಿ ಮಾತನಾಡಿದ ಶಿವರಾಜಕುಮಾರ್, “ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ತಾಯಿ ಕುರಿತಾಗಿ ಅದೆಷ್ಟೋ ಹಾಡುಗಳಿವೆ. ಅಪ್ಪಾಜಿ, ನನ್ನ ಹಾಗೂ ಅಪ್ಪು ಚಿತ್ರಗಳಲ್ಲೂ ತಾಯಿ ಕುರಿತ ಹಾಡುಗಳಿವೆ. ತಾಯಿ ವಿಷಯ ಬಂದಾಗಿ ಎಮೋಷನಲ್ ಆಗುತ್ತೀನಿ. ತಾಯಿ ಇಲ್ಲದವರಿಗೆ ಆಕೆಯ ಮಹತ್ವ ಗೊತ್ತು. ಬದುಕಿದ್ದಾರೆ. ಬೈತೀವಿ, ಪ್ರೀತಿ ಮಾಡುತ್ತೀವಿ, ಜಗಳ ಮಾಡುತ್ತೀವಿ. ಹೋದ ಮೇಲೆ ನಷ್ಟ ಗೊತ್ತಾಗುತ್ತದೆ. ನಾವು ಇಷ್ಟರ ಮಟ್ಟಿಗೆ ಇಲ್ಲಿ ನಿಲ್ಲೋಕೆ ಅಮ್ಮನೇ ಕಾರಣ’ ಎಂದು ಎಮೋಷನಲ್ ಆದರು ಶಿವರಾಜಕುಮಾರ್.
ಗುರುಕಿರಣ್ ಈ ಚಿತ್ರದ ಹಾಡುಗಳನ್ನು ಹೃದಯದಿಂದ ಸಂಯೋಜಿಸಿದ್ದಾರೆ ಎಂದರು ಸಾಧು ಕೋಕಿಲ. “ಇತ್ತೀಚೆಗೆ ಪುನೀತ್ ಅವರಿಗೆ ಹಾಡು ಕೇಳಿಸಲು ಗುರು ಬಂದಿದ್ದರು. ಈ ತರಹದ ಹಾಡು ಕೇಳಿ ತುಂಬಾ ವರ್ಷ ಆಗಿತ್ತು. ಒಂದು ಹಾಡು ತಮ್ಮ ಎಮೋಷನಲ್ ಆಗಿತ್ತು. ಆ ಹಾಡನ್ನು ಯಾರಿಂದಲೋ ಹಾಡಿಸಿದ್ದರು. “ನಾನು ಒಮ್ಮೆ ಹಾಡುತ್ತೀನಿ. ಇಷ್ಟ ಆದರೆ ಇಟ್ಟುಕೊಳ್ಳಿ, ಇಲ್ಲವಾದರೆ ಕಿತ್ತು ಹಾಕಿ’ ಅಂತ ನಾನೇ ಕೇಳಿಕೊಂಡೆ. ಗುರು ಒಪ್ಪಿ ನನ್ನಿಂದ ಹಾಡಿಸಿದ್ದಾರೆ’ ಎಂದರು ಸಾಧು ಕೋಕಿಲ. ಇನ್ನು ಈ ಚಿತ್ರದ ಹೆಸರೇ ಬಹಳ ಆಪ್ಯಾಯಮಾನವಾಗಿದೆ ಎಂದರು ವಿ. ಮನೋಹರ್. ತಮ್ಮನ್ನು ಬೆಳೆಸಿದಂತೆ ಈ ಆಡಿಯೋ ಕಂಪೆನಿಯನ್ನೂ ಬೆಳೆಸಿ ಎಂದು ದ್ವಾರಕೀಶ್ ಕರೆ ನೀಡಿದರೆ, ಚಿತ್ರದ ಹಾಡುಗಳು ಬಹಳ ಚೆನ್ನಾಗಿವೆ ಎಂದು ಭಾರ್ಗವ ಅವರು ಮೆಚ್ಚಿಕೊಂಡರು.