ಬೆಂಗಳೂರು: ಸರ್ಕಾರ ನಡೆಸುವವರ ಧೋರಣೆ ವಿರುದ್ಧ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದ್ ಸಿಂಗ್ ಸೇರಿದಂತೆ ನಾವು ಒಟ್ಟು 14 ಮಂದಿ ರಾಜೀನಾಮೆ ನೀಡಿದ್ದೇವೆ ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಶನಿವಾರ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಪೀಕರ್ ಗೆ ನಮ್ಮ ರಾಜೀನಾಮೆ ಸಲ್ಲಿಸಿದ್ದೇವೆ. ನಮ್ಮ ರಾಜೀನಾಮೆ ಅಂಗೀಕರಿಸುವ ವಿಶ್ವಾಸ ಇದೆ ಎಂದರು.
ಮೈತ್ರಿ ಸರ್ಕಾರ ತನ್ನ ಸ್ವಂತ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ್ದಾರೆ. ಇದು ಸಣ್ಣ ವಿಷಯ ಆದರೂ ಮಹತ್ವದ್ದು, ಶಿಕ್ಷಣ ಸಚಿವರ ಆಯ್ಕೆಯೂ ಸರಿ ಇಲ್ಲ ಎಂದು ಆರೋಪಿಸಿದರು.
ಪೊಲೀಸ್ ಭದ್ರತೆಯಲ್ಲಿ ತೆರಳಿದ ಅತೃಪ್ತ ಶಾಸಕರು:
ರಾಜ್ಯಪಾಲ ವಜೂಭಾಯ್ ವಾಲಾ ಅವರನ್ನು ಭೇಟಿಯಾದ ಅತೃಪ್ತ ಶಾಸಕರು, ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರಿಗೆ ಪೊಲೀಸ್ ಭದ್ರತೆ ನೀಡುವಂತೆ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಗೆ ರಾಜ್ಯಪಾಲರು ಸೂಚನೆ ನೀಡಿದ್ದರು.