ಮಂಗಳೂರು: ವಂದೇ ಭಾರತ್ ಎಕ್ಸ್ ಪ್ರಸ್ ರೈಲಿನ ಬೋಗಿಗಳನ್ನು 14 ನಿಮಿಷಗಳಲ್ಲಿ ಸ್ವತ್ಛಗೊಳಿಸುವ “14 ಮಿನಿಟ್ಸ್ ಮಿರಾಕಲ್’ ಯೋಜನೆಯನ್ನು ಭಾರತೀಯ ರೈಲ್ವೇ ಅಳವಡಿಸಿ ಕೊಂಡಿದ್ದು, ಅದರಂತೆ ದಕ್ಷಿಣ ರೈಲ್ವೇ ಸ್ವಚ್ಛತೆಯೇ ಸೇವೆ ಅಭಿಯಾನದ ಭಾಗವಾಗಿ ಈ ಉಪಕ್ರಮವನ್ನು ಅನುಸರಿಸಿದೆ.
ರವಿವಾರ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ನಂ.20633 ಕಾಸರಗೋಡು-ತಿರುವನಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸ್ವಚ್ಛಗೊಳಿಸ ಲಾಯಿತು. ಪ್ರತಿ ಬೋಗಿಗೆ ಮೂರು ಜನರಂತೆ ಒಟ್ಟು 48 ಮಂದಿ 16 ಬೋಗಿಗಳನ್ನು ಸ್ವಚ್ಛಗೊಳಿಸಿದರು.
ಮಂಗಳೂರು ಕೋಚಿಂಗ್ ಡಿಪ್ಪೋದ ಅಧಿಕಾರಿ ಮನೋಜ್ ಬಿ. ಅವರು 14 ಮಿನಿಟ್ಸ್ ಮಿರಾಕಲ್‌ನ ಬದ್ಧತೆಯ ಪ್ರತಿ ಬೋಧಿಸಿದರು.
ಪಾಲಕ್ಕಾಡ್ ವಿಭಾಗದ ಹೆಚ್ಚುವರಿ ವಿಭಾಗೀಯ ಪ್ರಬಂಧಕ ಸಕೀರ್ ಹುಸೈನ್ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ವಚ್ಛತಾ ಸಿಬಂದಿಯೊಂದಿಗೆ ಸಂವಾದ ಮಾಡಿದರು.
ಈ ಕಾರ್ಯಕ್ರಮ ರೈಲ್ವೇ ಪ್ರಯಾಣ ಹೆಚ್ಚು ಸಕಾಲಿಕ, ಆನಂದದಾಯಕ ಮತ್ತು ಆರೋಗ್ಯಕರವಾಗಿಸಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.