Advertisement

ಉಷ್ಣ ಸ್ಥಾವರಗಳಲ್ಲಿ 14 ಲಕ್ಷ ಟನ್‌ ಕಲ್ಲಿದಲು ದಾಸ್ತಾನು

09:55 AM Dec 13, 2019 | Sriram |

ಬೆಂಗಳೂರು: ಸದಾ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿದ್ದ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಈಗ 14 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು ಇದ್ದು, ಅತಿ ಹೆಚ್ಚು ಕಲ್ಲಿದ್ದಲು ಸಂಗ್ರಹದ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ!

Advertisement

ರಾಜ್ಯದ ಅಲ್ಲಲ್ಲಿ ಮುಂದುವರಿದ ಮಳೆ, ಜಲಾಶಯಗಳಲ್ಲಿ ಉತ್ತಮ ನೀರು ಸಂಗ್ರಹದಿಂದ ಜಲವಿದ್ಯುತ್‌ ಬಳಕೆ ಹೆಚ್ಚಳ, ಉಷ್ಣ ವಿದ್ಯುತ್‌ ಉತ್ಪಾದನೆ ಪ್ರಮಾಣ ಇಳಿಕೆ, ಗಣನೀಯ ಪ್ರಮಾಣದಲ್ಲಿ ಸೌರ ವಿದ್ಯುತ್‌ ಪೂರೈಕೆ, ನಿಯಮಿತವಾಗಿ ಕಲ್ಲಿದ್ದಲು ಪೂರೈಕೆಯಿಂದಾಗಿ ದಾಸ್ತಾನು ದಾಖಲೆ ಸಂಗ್ರಹಕ್ಕೇರಿದೆ. ಡಿ.15ರಿಂದ ಯರಮರಸ್‌ ಸ್ಥಾವರ ಕಾರ್ಯಾರಂಭವಾಗಲಿದ್ದು, ಕಲ್ಲಿದ್ದಲು ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ.

ರಾಯಚೂರಿನಲ್ಲಿ ಆರ್‌ಟಿಪಿಎಸ್‌, ಬಳ್ಳಾರಿಯಲ್ಲಿ ಬಿಟಿಪಿಎಸ್‌, ಯರಮರಸ್‌ನಲ್ಲಿ ವೈಟಿಪಿಎಸ್‌ ಉಷ್ಣ ಸ್ಥಾವರಗಳಿದ್ದು, ಗರಿಷ್ಠ 5000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥಯವಿದೆ. ಈ ಪೈಕಿ ಆರ್‌ಟಿಪಿಎಸ್‌, ಬಿಟಿಪಿಎಸ್‌ ಸ್ಥಾವರಗಳಲ್ಲಷ್ಟೇ ಸದ್ಯ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಬೃಹತ್‌ ಉಷ್ಣ ಸ್ಥಾವರಗಳಿದ್ದರೂ ಕಲ್ಲಿದ್ದಲಿಗೆ ಅನ್ಯ ರಾಜ್ಯಗಳನ್ನೇ ಅವಲಂಬಿಸಬೇಕಿದೆ. ಹೀಗಾಗಿ ವರ್ಷದಲ್ಲಿ ಬಹುತೇಕ ಸಂದರ್ಭದಲ್ಲಿ ಕಲ್ಲಿದ್ದಲು ಕೊರತೆ ಉಷ್ಣ ಸ್ಥಾವರಗಳನ್ನು ಕಾಣುತ್ತಿತ್ತು. ಕಳೆದ ವರ್ಷ ಆಯಾ ದಿನ ಪೂರೈಕೆಯಾದ ಕಲ್ಲಿದ್ದಲನ್ನೇ ಬಳಸಿ ವಿದ್ಯುತ್‌ ಉತ್ಪಾದಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

14 ಲಕ್ಷ ಟನ್‌ ಸಂಗ್ರಹ
ಹಲವು ವರ್ಷಗಳಿಂದ ರಾಜ್ಯದ ಉಷ್ಣ ಸ್ಥಾವರಗಳಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿರಲಿಲ್ಲ .ಇದರಿಂದ ಪದೇ ಪದೇ ಗಣಿ ಕಂಪೆನಿಗಳಿಗೆ ಪತ್ರ ಬರೆಯುವುದು, ಕಂಪೆನಿ ಪ್ರತಿನಿಧಿಗಳನ್ನು ಭೇಟಿಯಾಗಿ ಕಲ್ಲಿದ್ದಲು ಪೂರೈಕೆಗೆ ಮನವಿ ಮಾಡುವುದು ನಡೆಯುತ್ತಿತ್ತು. ಆದರೆ ಕೆಲ ತಿಂಗಳಿನಿಂದ ರಾಜ್ಯಕ್ಕೆ ಕಲ್ಲಿದ್ದಲು ನಿಯಮಿತವಾಗಿ ಪೂರೈಕೆಯಾಗುತ್ತಿದೆ. ಪರಿಣಾಮವಾಗಿ ಆರ್‌ಟಿಪಿಎಸ್‌ನಲ್ಲಿ 10.6 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು ಶೇಖರಣೆಯಾಗಿದೆ. ಬಿಟಿಪಿಎಸ್‌ನಲ್ಲಿ 3.5 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು ಇದ್ದು, ಒಟ್ಟು 14 ಲಕ್ಷ ಟನ್‌ಗೆ ಏರಿಕೆಯಾಗಿದೆ.ಸದಾ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿದ್ದ ಉಷ್ಣ ಸ್ಥಾವರಗಳಲ್ಲಿ ಕೆಲ ತಿಂಗಳಿನಿಂದೀಚೆಗೆ ದಾಸ್ತಾನು ಪ್ರಮಾಣ ಏರುತ್ತಿದೆ. 7.5 ಲಕ್ಷ ಟನ್‌ ದಾಸ್ತಾನು ಇದ್ದುದೇ ಈವರೆಗಿನ ದಾಖಲೆ ಎನಿಸಿತ್ತು. ಇದೀಗ ದಾಸ್ತಾನು 14 ಲಕ್ಷ ಟನ್‌ಗೆ ಏರಿದ್ದು, ಸಾರ್ವಕಾಲಿಕ ದಾಖಲೆ ಎನಿಸಿದೆ.

ದಾಖಲೆ ಸಂಗ್ರಹಕ್ಕೆ ಕಾರಣ
ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚು ಮಳೆ ಸುರಿದಿದ್ದರಿಂದ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳು ಬಹುತೇಕ ಭರ್ತಿಯಾದವು. ಜಲಾಶಯಗಳಲ್ಲಿನ ನೀರು ಸಂಗ್ರಹವನ್ನು ನಿಯಮಿತವಾಗಿ ಬಳಸಿದರೂ ಜೂನ್‌ವರೆಗೆ ಪರಿಸ್ಥಿತಿ ನಿಭಾಯಿಸಬಹುದಾಗಿದೆ. ಹಾಗಾಗಿ ಕೆಲ ತಿಂಗಳಿನಿಂದ ಜಲವಿದ್ಯುತ್‌ ಉತ್ಪಾದನೆಗೆ ಒತ್ತು ನೀಡಲಾಗಿದೆ. ನೆರೆ, ರಾಜ್ಯದ ಹಲವೆಡೆ ಮಳೆ ಆಗಾಗ್ಗೆ ಸುರಿಯುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ ಬಳಕೆಯೂ ಕಡಿಮೆ ಇದ್ದು, ಬೇಡಿಕೆಯೂ ತಗ್ಗಿದೆ. ಹೀಗಾಗಿ ಉಷ್ಣ ಸ್ಥಾವರಗಳ ಮೇಲಿನ ಒತ್ತಡ ಕಡಿಮೆಯಾಗಿದ್ದು, ಬೆರಳೆಣಿಕೆ ಘಟಕಗಳಲ್ಲಷ್ಟೇ ಅಲ್ಪ ಪ್ರಮಾಣದ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಹಾಗಾಗಿ ಕಲ್ಲಿದ್ದಲು ಸಂಗ್ರಹ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಬೇಡಿಕೆಯ ಅರ್ಧದಷ್ಟು ಸೌರಶಕ್ತಿ
ರಾಜ್ಯಾದ್ಯಂತ ಸದ್ಯ ಸರಾಸರಿ 11,000 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯಿದೆ. ಕೆಲ ದಿನಗಳಿಂದ 6000 ಮೆಗಾವ್ಯಾಟ್‌ನಷ್ಟು ಸೌರ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಬೇಡಿಕೆಯ ಅರ್ಧದಷ್ಟಿದೆ. ಜತೆಗೆ ಜಲವಿದ್ಯುತ್‌, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಂಚಿಕೆಯಾದಷ್ಟು ವಿದ್ಯುತ್‌ ಪೂರೈಕೆಯಿಂದ ಕೊರತೆಯೇ ಇಲ್ಲದಂತಾಗಿದೆ. ಪರಿಸ್ಥಿತಿಗೆ ತಕ್ಕಂತೆ ಉಷ್ಣ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಭಾರೀ ದಾಸ್ತಾನು ಅಪಾಯ
ಲಕ್ಷಾಂತರ ಟನ್‌ ಕಲ್ಲಿದ್ದಲನ್ನು ಸುದೀರ್ಘ‌ ಕಾಲ ದಾಸ್ತಾನು ಮಾಡುವುದು ಅಪಾಯವೆನಿಸಿದೆ. ಏಕೆಂದರೆ ಕಲ್ಲಿದ್ದಲು ದಾಸ್ತಾನಿನಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಹೆಚ್ಚು ದಿನ ದಾಸ್ತಾನು ಮಾಡಿದಂತೆ ಕಲ್ಲಿದ್ದಲಿನ ದಹನ ಸಾಮರ್ಥಯವೂ ಕ್ಷೀಣಿಸುತ್ತದೆ. ಹಾಗಾಗಿ ದಾಸ್ತಾನು ವಿಲೇವಾರಿಗೂ ಕೆಪಿಸಿಎಲ್‌ ಗಮನ ಹರಿಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಂಗಳವಾರದಿಂದ ಆರ್‌ಟಿಪಿಎಸ್‌ನ ಎಂಟೂ ಘಟಕಗಳು ವಿದ್ಯುತ್‌ ಉತ್ಪಾದನೆ ಆರಂಭಿಸಿದ್ದು, ವರ್ಷದ ಬಳಿಕ ಎಲ್ಲ ಘಟಕಗಳು ಕಾರ್ಯಾರಂಭವಾದಂತಾಗಿದೆ. ಜತೆಗೆ ಬಿಟಿಪಿಎಸ್‌ನ ಒಂದು ಘಟಕ ಕಾರ್ಯ ನಿರ್ವಹಿಸುತ್ತಿದೆ. ಆದರೆ ಎರಡೂ ಕಡೆ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸುತ್ತಿಲ್ಲ. ಆದರೆ ಎಲ್ಲ ಘಟಕಗಳ ಕಾರ್ಯಾರಂಭದಿಂದ ಕಲ್ಲಿದ್ದಲು ಬಳಕೆ ಹೆಚ್ಚಾಗಲಿದೆ.

ಭಾನುವಾರ ಯರಮರಸ್‌ ಘಟಕ ಆರಂಭ
ಯರಮರಸ್‌ನ ವೈಟಿಪಿಎಸ್‌ ಸ್ಥಾವರ ಈ ಹಿಂದೆ ಕಾರ್ಯಾರಂಭವಾಗಿದ್ದರೂ ಮೂರು ತಿಂಗಳ ಬಳಿಕ ಸ್ಥಗಿತಗೊಂಡಿತ್ತು. ಎರಡು ವರ್ಷಗಳ ಬಳಿಕ ಭಾನುವಾರದಿಂದ (ಡಿ.15) ಘಟಕ ಕಾರ್ಯಾರಂಭವಾಗುತ್ತಿದೆ. ಸದ್ಯ ಈ ಸ್ಥಾವರಕ್ಕೆ ಸಿಂಗರೇಣಿ ಕೊಲಿರೀಸ್‌ ಕೋಲ್‌ ಲಿಮಿಟೆಡ್‌ನಿಂದ ಕಲ್ಲಿದ್ದಲು ಪೂರೈಕೆಯಾಗಲಿದೆ. ಕೇವಲ ಎರಡು ಘಟಕಗಳಿಂದ ಗರಿಷ್ಠ 1600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥಯ ಹೊಂದಿರುವ ಸುಧಾರಿತ ಸ್ಥಾವರ ಇದಾಗಿದೆ. ಇದು ಕಾರ್ಯಾರಂಭವಾದಂತೆ ಕಲ್ಲಿದ್ದಲು ಬಳಕೆ ಹೆಚ್ಚಾಗಲಿದೆ.

ರಾಜ್ಯದ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸಾಕಷ್ಟಿದೆ. ಸ್ಥಾವರಗಳ ಸಾಮರ್ಥಯದ ಶೇ.35ರಷ್ಟು ವಿದ್ಯುತ್‌ ಉತ್ಪಾದಿಸುತ್ತಿದ್ದರೆ, ಕಲ್ಲಿದ್ದಲು ಪೂರೈಕೆ ಶೇ.80ರಷ್ಟಿದೆ. ವಿದ್ಯುತ್‌ ಬೇಡಿಕೆಯೂ ಸಾಕಷ್ಟು ಇಳಿಕೆಯಾಗಿರುವುದರಿಂದ ಶೇ. 70ರಷ್ಟು ಉತ್ಪಾದನೆ ತಗ್ಗಿಸಲಾಗಿದ್ದು, ಕಲ್ಲಿದ್ದಲು ದಾಸ್ತಾನು ಹೆಚ್ಚಾಗಿದೆ.
-ವಿ. ಪೊನ್ನುರಾಜ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next