Advertisement

ಬೀದರ್ ನಲ್ಲಿ 136 ಅನ್ನದಾತರ ಆತ್ಮ ಹತ್ಯೆ

06:05 PM Dec 26, 2020 | Adarsha |

ಬೀದರ್ : ಪ್ರಕೃತಿ ವಿಕೋಪ, ಬೆಳೆಗೆ ಸೂಕ್ತ ಬೆಲೆ ಸಿಗದೆ ಕೃಷಿಕರು ಅಕ್ಷರಶಃ ನಲುಗಿ ಹೋಗಿದ್ದಾರೆ. ಮನುಕುಲಕ್ಕೆ ಅನ್ನ ನೀಡುವ ಅನ್ನದಾತರೇ ಸಂತ್ರಸ್ತರಾಗುತ್ತಿದ್ದಾರೆ. ಅಷ್ಟೇ ಅಲ್ಲ ಸಾಲದ ಸುಳಿಯಿಂದಾಗಿ ನೇಣಿಗೆ ಕೊರಳೊಡುತ್ತಿದ್ದಾರೆ. ಗಡಿ ನಾಡಲ್ಲಿ ಕಳೆದ ಮೂರು ವರ್ಷದಲ್ಲಿ 136 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಮಳೆಯಾಶ್ರಿತ ಪ್ರದೇಶವಾಗಿರುವ ಬೀದರ ರೈತರಿಗೆ ಸಮಸ್ಯೆಗಳು ಬೆಂಬಿಡದೆ ಕಾಡುತ್ತಿವೆ. ಜಿಲ್ಲೆಯಲ್ಲಿ ಮಂಡಿಯೂರುವ ತೀವ್ರ ಬರಗಾಲದ ಜತೆಗೆ ಒಮ್ಮೊಮ್ಮೆ ಅತಿವೃಷ್ಟಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ. ಆರಂಭದ ಮುಂಗಾರು ಮಳೆಯನ್ನು ನಂಬಿ ಭೂಮಿಯ ಒಡಲಿಗೆ ಕಾಳನ್ನು ತುಂಬುವ ರೈತರಿಗೆ ಮೇಘರಾಜ ಮಾತ್ರ ಕರುಣೆ ತೋರುತ್ತಿಲ್ಲ.

ಮಳೆ ಕೈಕೊಟ್ಟು ಹಾಕಿದ ಬೀಜವನ್ನೇ ಸುಟ್ಟು ಹೋಗುವಂತೆ ಮಾಡಿದ್ದರೆ, ಅತಿಯಾದ ಮಳೆ ಸುರಿದು ಕಟಾವಿಗೆ ಬರುವ ಫಸಲನ್ನು ಕೊಚ್ಚಿ ಹೋಗುವಂತೆ ಮಾಡುತ್ತಿದೆ. ಹೀಗೆ ಸಾಲ ಸೂಲ ಮಾಡಿ ಕೃಷಿ ಮಾಡುವ ರೈತ ಕೊನೆಗೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದ್ದು, ಆತ್ಮಹತ್ಯೆಯಂಥ ಕಠಿಣ ನಿರ್ಧಾರದ ಹಾದಿ ತುಳಿಯುತ್ತಿದ್ದಾನೆ. ಕಡಿಮೆ ಬಡ್ಡಿ ದರದಲ್ಲಿ ಸಾಲ, ಬಡ್ಡಿ ಮನ್ನಾ, ರಿಯಾಯಿತಿ ದರದಲ್ಲಿ ಬೀಜ ಮತ್ತು ಕೃಷಿ ಪರಿಕರ ವಿತರಣೆಯಂಥ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದರೂ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಮಾತ್ರ ಇಳಿಕೆ ಕಂಡು ಬರುತ್ತಿಲ್ಲ. ಇದಕ್ಕೆ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿನ ಕೊರತೆಯೇ ಕಾರಣ.

ಸರ್ಕಾರದ ಸಹಾಯಹಸ್ತ ರೈತರನ್ನು ತಲುಪಿಲ್ಲ ಎಂಬುದಕ್ಕೆ ಆತ್ಮಹತ್ಯೆಗಳು ಸರಣಿ ರೂಪದಲ್ಲಿ ಮುಂದುವರಿದಿರುವುದೇ ಸಾಕ್ಷಿ. ಜಿಲ್ಲೆಯಲ್ಲಿ ಕಾರಂಜಾ ಜಲಾಶಯ ಹೊರತುಪಡಿಸಿದರೆ ಯಾವುದೇ ನೀರಾವರಿ ಸೌಲಭ್ಯಗಳಿಲ್ಲ. ಮಳೆ ನೀರಿನ ಮೇಲೆ ರೈತರು ಹೆಚ್ಚು ಅವಲಂಬಿತರು. ಬರಗಾಲ ಇಲ್ಲವೆ ಅತಿ ಹೆಚ್ಚಿನ ಮಳೆ ಇಲ್ಲಿನ ರೈತರ ಬದುಕಿಗೆ ಮಾರಕವಾಗುತ್ತಿವೆ.

ಅಂತರ್ಜಲ ಕುಸಿತ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದು ರೈತರನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡುತ್ತಿದೆ. ಆದರೂ, ರೈತರಲ್ಲಿ ವಿಶ್ವಾಸ ಮೂಡಿಸುವಂತ ಯಾವುದೇ ಕಾರ್ಯಕ್ರಮ, ಪೂರಕ ಯೋಜನೆಗಳು ಜಾರಿಯಾಗದಿರುವುದು ವಿಪರ್ಯಾಸ. ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ 2018-19ರಿಂದ 2020-21ರವರೆಗೆ ಜಿಲ್ಲೆಯಲ್ಲಿ 136 ರೈತರು ಜೀವ ಕಳೆದುಕೊಂಡಿದ್ದಾರೆ.

Advertisement

ಈ ಪೈಕಿ ಅತಿ ಹೆಚ್ಚು ಭಾಲ್ಕಿ ತಾಲೂಕಿನಲ್ಲಿ 31, ಬಸವಕಲ್ಯಾಣದಲ್ಲಿ 30, ಔರಾದನಲ್ಲಿ 27, ಹುಮನಾಬಾದನಲ್ಲಿ 26 ಮತ್ತು ಬೀದರ ತಾಲೂಕಿನಲ್ಲಿ 22 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2018-19ರಲ್ಲಿ 57, 2019-20ರಲ್ಲಿ 42 ಮತ್ತು 2020-21ರಲ್ಲಿ ಈವರೆಗೆ 37 ಪ್ರಕರಣಗಳು ನಡೆದಿವೆ.

ಇದನ್ನೂ ಓದಿ:ದತ್ತು ಶಾಲೆಗಳ ಅಭಿವೃದ್ಧಿಗೆ ಯೋಜನೆ ಸಿದ್ಧ

3 ಪ್ರಕರಣಕ್ಕೆ ಸಿಕ್ಕಿಲ್ಲ ಪರಿಹಾರ

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರ ನೀಡುವ ಪರಿಹಾರಧನ ಸಿಗುವ ಗ್ಯಾರಂಟಿಯೂ ಇಲ್ಲ. ಅದನ್ನು ಪಡೆಯಲು ಕಠಿಣ ನಿಯಮ ರೂಪಿಸಿರುವುದು, ಆತ್ಮಹತ್ಯೆಗೆ ಒಳಗಾಗುವ ರೈತ ಕುಟುಂಬಕ್ಕೆ ಕಂಟಕವಾಗುತ್ತಿದೆ. ಕಳೆದ 3 ವರ್ಷದಲ್ಲಿ ವರದಿಯಾದ ಒಟ್ಟು 136 ಆತ್ಮಹತ್ಯೆ ಕೇಸ್‌ ಗಳಲ್ಲಿ 39 ಪಕ್ರರಣಗಳನ್ನು ವಿವಿಧ ಕಾರಣಕ್ಕೆ ತಿರಸ್ಕೃತಗೊಂಡಿದ್ದು, 94 ಪ್ರಕರಣಗಳಿಗೆ ಪರಿಹಾರ ವಿತರಣೆ ಆಗಿದೆ. ಇನ್ನೂ 3 ರೈತ ಕುಟುಂಬಕ್ಕೆ ಪರಿಹಾರ ವಿತರಣೆ ಬಾಕಿ ಇದೆ.

ಸರ್ಕಾರ ಬೆಲೆ ಕುಸಿದಾಗ ಕೇವಲ ಬೆಂಬಲ ಬೆಲೆ ಪ್ರಕಟಿಸಿ ಕಣ್ಣೊರೆಸುವ ಬದಲು ಮಾರುಕಟ್ಟೆಯಲ್ಲಿ ಖರೀದಿಗೆ ಮುಂದಾಗಬೇಕು. ಆದರೆ, ಸರ್ಕಾರ ಕೇವಲ ಬೆಂಬಲ ಬೆಲೆ ಪ್ರಕಟಿಸಿ ಸುಮ್ಮನಾಗುವುದರಿಂದ ಮಾರುಕಟ್ಟೆ ಮೇಲೆ ಯಾವುದೇ ರೀತಿಯ ನಿಯಂತ್ರಣ ಇಲ್ಲದಂತಾಗಿದೆ. ವೈಜ್ಞಾನಿಕ ಬೆಲೆಯಿಂದ ವಂಚಿತರಾಗಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾನೆ.

 ವೈಜಿನಾಥ ಕನಕಟ್ಟೆ, ರೈತ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next